ಕಾರವಾರ : ದೇಶ-ವಿದೇಶ ಹಾಗೂ ಯಾವುದೇ ರಾಜ್ಯದ ವ್ಯಕ್ತಿ ಕರ್ನಾಟಕದಲ್ಲಿ ರಸ್ತೆ ಅಪಘಾತಕ್ಕೊಳಗಾದರೆ, ಆಸ್ಪತ್ರೆಗೆ ದಾಖಲಾದ ಮೊದಲ 7 ದಿನಗಳವರೆಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಕುಮಟಾದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯ CSR ನಿಧಿಯಡಿ ನಿರ್ಮಿಸಲಾದ ಹೊಸ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಪಘಾತಕ್ಕೊಳಗಾದವರ ತುರ್ತು ಜೀವ ರಕ್ಷಣೆಗೆ ಆದ್ಯತೆ ನೀಡಲು ಹಾಗೂ ಚಿಕಿತ್ಸಾ ವೆಚ್ಚದ ಸಾರ್ವಜನಿಕ ಗೊಂದಲ ನಿವಾರಿಸಲು ಈ ಯೋಜನೆ ರೂಪಿಸಲಾಗುತ್ತಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗಿದೆ ಎಂದರು.
ರಾಜ್ಯದಲ್ಲಿ ತುರ್ತು ಕರೆ ಬಂದ 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ನಿಯಮಿತ ಸಮಯದಲ್ಲಿ ಆಂಬ್ಯುಲೆನ್ಸ್ ಬರದಿದ್ದರೆ ನಿರ್ವಹಣಾ ಸಂಸ್ಥೆಗೆ ₹3,000 ದಿಂದ ₹5,000 ದವರೆಗೆ ದಂಡ ವಿಧಿಸುವ ಕಾಯ್ದೆ ತರಲಾಗುವುದು ಎಂದು ಸಚಿವರು ಹೇಳಿದರು. ಶಾಲಾ ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ 'ಫುಡ್ ಸೇಫ್ಟಿ ಆ್ಯಕ್ಟ್' ಅಡಿಯಲ್ಲಿ ಜಂಕ್ ಫುಡ್ ತಡೆಗೆ ಕಠಿಣ ನಿಯಮ ರೂಪಿಸುವುದರ ಜೊತೆಗೆ, ಆಹಾರ ಕಲಬೆರಕೆ ತಡೆಯಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ನರ್ಸ್‌ಗಳು, ಫಾರ್ಮಾಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳನ್ನು ಒಪ್ಪಂದ ಹಾಗೂ ಖಾಯಂ ಆಧಾರದ ಮೇಲೆ ತಕ್ಷಣ ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಕುಮಟಾದ ಈ ಟ್ರಾಮಾ ಕೇರ್ ಸೆಂಟರ್ ರಾಜ್ಯ ಆರೋಗ್ಯ ಇಲಾಖೆಯ 3ನೇ ಕೇಂದ್ರವಾಗಿದ್ದು, ಅಪಘಾತಕ್ಕೊಳಗಾಗುವವರಿಗೆ ಇದು ವರವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಜನರಿಗೆ ಆಸ್ಪತ್ರೆಯ ಅಗತ್ಯವೇ ಬರದಂತೆ ತಡೆಗಟ್ಟುವ ವಾತಾವರಣ ಮತ್ತು ಜಾಗೃತಿ ಮೂಡಿಸುವುದು ತಮ್ಮ ಪ್ರಮುಖ ಗುರಿ ಎಂದ ಅವರು, ಶವಾಗಾರಕ್ಕೆ ಬರುವ ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ಫ್ಯಾನ್, ಪೊಲೀಸ್ ಪಂಚನಾಮೆ ಕೊಠಡಿ ಹಾಗೂ ಫ್ರೀಜರ್ ಒಳಗೊಂಡ ಆಧುನಿಕ ಮಾರ್ಚುರಿ ಕಟ್ಟಡ ನಿರ್ಮಿಸಲು ಬಿ.ಇ.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ₹2.73 ಕೋಟಿ ವೆಚ್ಚದ ಈ ಕೇಂದ್ರದ ನಿರ್ಮಾಣಕ್ಕೆ ಬಿಇಎಲ್ ಸಂಸ್ಥೆಯು ತಮ್ಮ ಸಿಎಸ್ಆರ್ ನಿಧಿಯಿಂದ ಪೂರ್ಣ ಮೊತ್ತವನ್ನು ನೀಡಿದೆ ಹಾಗೂ ಸ್ಥಳೀಯ ರೋಟರಿ ಕ್ಲಬ್ ಸಹ ₹1.70 ಕೋಟಿಗೂ ಹೆಚ್ಚು ಕೊಡುಗೆ ನೀಡಿದೆ ಎಂದು ತಿಳಿಸಿದರು.