ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಾಗುವ ಕಾವೇರಿ ಐದನೇ ಹಂತದ ಯೋಜನೆ ಇದೇ ಅಕ್ಟೋಬರ್ 16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಲೋಕಾರ್ಪಣೆಗೆ ಸಿದ್ಧವಾಗಿದೆ.
ಜೈಕಾ (ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4,336 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಗೆ ಸಮರ್ಪಕ ನೀರನ್ನು ಒದಗಿಸುವ ಹಾಗೂ ಬೆಂಗಳೂರಿನ ದೂರದೃಷ್ಟಿಯನ್ನಿಟ್ಟುಕೊಂಡು ಮಹತ್ವದ ನಿರ್ಧಾರವನ್ನು 2004ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆ ರೂಪಿಸಿ ಚಾಲನೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದ್ದು, ಮೂಲೆಮೂಲೆಗೂ ಕಾವೇರಿ ನೀರು ಸರಬರಾಜಾಗಲಿದೆ. ಇದರಿಂದ ಹೆಚ್ಚುವರಿಯಾಗಿ 50 ಲಕ್ಷ ಜನರು ಇದರ ಸದುಪಯೋಗಪಡೆದುಕೊಳ್ಳಲಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಮಹಾನಗರಿ ಬೆಂಗಳೂರಿನ ಭವಿಷ್ಯದ ದೂರದೃಷ್ಟಿಯನ್ನಿಟ್ಟುಕೊಂಡು ಅನುಷ್ಠಾನಗೊಳಿಸಿದ ಮಹತ್ವದ ಯೋಜನೆ ಇದಾಗಿದೆ. ಇದರಿಂದ 110 ಹಳ್ಳಿಗಳ ನಿವಾಸಿಗಳಿಗೆ ಹಾಗೂ ಬೆಂಗಳೂರು ನಗರದ ಎಲ್ಲ ನಿವಾಸಿಗಳಿಗೆ ಸಮರ್ಪಕ ನೀರು ಸರಬರಾಜಾಗಲಿದೆ.
ಕಾವೇರಿ ಐದನೇ ಹಂತದ ಲೋಕಾರ್ಪಣೆಯನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿದೆ. ಕಾರ್ಯಕ್ರಮದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ, ರಾಜ್ಯ ಸಚಿವರು ಹಾಗೂ ಸಂಸದರು ಮತ್ತು ಶಾಸಕರು ಸೇರಿದಂತೆ ಇನ್ನೀತರ ಎಲ್ಲ ಚುನಾಯಿತ ಪ್ರತಿನಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.