image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಕಲಿ ಬ್ಯಾಂಕ್ ಖಾತೆ ಅಕ್ರಮ ವಹಿವಾಟು: ಉನ್ನತ ತನಿಖೆಗೆ ಸಿ.ಟಿ. ರವಿ ಒತ್ತಾಯ

ನಕಲಿ ಬ್ಯಾಂಕ್ ಖಾತೆ ಅಕ್ರಮ ವಹಿವಾಟು: ಉನ್ನತ ತನಿಖೆಗೆ ಸಿ.ಟಿ. ರವಿ ಒತ್ತಾಯ

ಚಿಕ್ಕಮಗಳೂರು: ಬಡವರು ಹಾಗೂ ದಿನಗೂಲಿ ಕಾರ್ಮಿಕರ ಹೆಸರಿನಲ್ಲಿ ಅವರ ಅರಿವಿಲ್ಲದೆ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಾಂತರ ರೂಪಾಯಿ ಅಕ್ರಮ ಹಣಕಾಸು ವಹಿವಾಟು ನಡೆಸಿರುವ ಗಂಭೀರ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಉಚಿತ ಬ್ಯಾಂಕ್ ಖಾತೆ ತೆರೆಯಿಸಿಕೊಡುವುದಾಗಿ ಹಾಗೂ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ನಂಬಿಸಿ ಅವರ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಆ ಬಳಿಕ ಫಲಾನುಭವಿಗಳ ಅರಿವಿಲ್ಲದೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಈ ಖಾತೆಗಳಿಗೆ ಫಲಾನುಭವಿಗಳ ಮೊಬೈಲ್ ಸಂಖ್ಯೆಗಳ ಬದಲಿಗೆ ಅವರ ಹೆಸರಿನಲ್ಲೇ ಪ್ರತ್ಯೇಕ ಸಿಮ್ ಕಾರ್ಡ್‌ಗಳನ್ನು ಪಡೆದು ಬೇರೆ ಮೊಬೈಲ್ ಸಂಖ್ಯೆಗಳನ್ನು ಜೋಡಿಸಲಾಗಿದೆ. ಇದಲ್ಲದೆ, ಖಾತೆ ತೆರೆಯಲ್ಪಟ್ಟಿರುವ ಫಲಾನುಭವಿಗಳಿಗೆ ಪಾಸ್‌ಬುಕ್, ಚೆಕ್‌ಬುಕ್ ಅಥವಾ ಎಟಿಎಂ ಕಾರ್ಡ್‌ಗಳನ್ನು ನೀಡದೆ ಅವರ ಹೆಸರಿನಲ್ಲಿ ಹಣಕಾಸು ವಹಿವಾಟು ನಡೆಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿವಿಧ ಮೂಲಗಳಿಂದ ಈ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಹಣ ಜಮೆಯಾಗಿದ್ದು, ನಂತರ ಅಪರಿಚಿತ ವ್ಯಕ್ತಿಗಳಿಂದ ಆ ಹಣವನ್ನು ಹಿಂಪಡೆಯಲಾಗಿದೆ ಅಥವಾ ಬೇರೆಡೆಗೆ ವರ್ಗಾಯಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಈ ಪ್ರಕರಣದಲ್ಲಿ ಗುರುತಿನ ದುರ್ಬಳಕೆ, ಹಣಕಾಸು ವಂಚನೆ ಹಾಗೂ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಗಳಿದ್ದು, ಇದರಲ್ಲಿ ರಾಜ್ಯ, ಅಂತರ್‌ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತಪಡಿಸಿರುವ ಸಿ.ಟಿ. ರವಿ ಅವರು, ಸೂಕ್ತ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ಹಾಗೂ ಇಡಿ ತನಿಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆದು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ