ಬೆಂಗಳೂರು : ರಾಜ್ಯದ ನಾಗರಿಕರು ಇನ್ನು ಮುಂದೆ ಜಾತಿ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು (ಪಿಆರ್‌ಸಿ) ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಪ್ರಮಾಣಪತ್ರಗಳನ್ನು ಮನೆಮನೆಗೆ ಉಚಿತವಾಗಿ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಇದರಿಂದಾಗಿ ನಾಗರಿಕರು ಕಚೇರಿಗಳಿಗೆ ಹತ್ತಾರು ಬಾರಿ ಅಲೆಯುವುದು ತಪ್ಪಲಿದ್ದು, ಕಾಲಮಿತಿಯೊಳಗೆ ಸೇವೆ ಸಿಗುವಂತಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಪೂರಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಒಟ್ಟು 4.85 ಕೋಟಿ ಜಾತಿ ಹಾಗೂ ನಿವಾಸ ಪ್ರಮಾಣಪತ್ರಗಳನ್ನು ಹಂತ ಹಂತವಾಗಿ ವಿತರಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದ್ದು, ಇವು ಯಾವುದೇ ವಿತರಣಾ ಶುಲ್ಕವಿಲ್ಲದೆ ನೇರವಾಗಿ ನಾಗರಿಕರ ಕೈಸೇರಲಿವೆ.
ಶಾಶ್ವತ ನಿವಾಸ ಪ್ರಮಾಣಪತ್ರವನ್ನು ವ್ಯವಸ್ಥಿತವಾಗಿ ವಿತರಿಸಲು ಸರ್ಕಾರ ಒಟ್ಟು 11 ಕಟ್ಟುನಿಟ್ಟಿನ ಮಾನದಂಡಗಳನ್ನು ನಿಗದಿಪಡಿಸಿದೆ. ಕರ್ನಾಟಕದಲ್ಲಿ ಜನನ, ಕನಿಷ್ಠ 10 ವರ್ಷಗಳ ಕಾಲ ಸತತ ವಾಸ, ರಾಜ್ಯದಲ್ಲಿ ಪಡೆದ ಶಿಕ್ಷಣ, ಇಲ್ಲಿನವರೊಂದಿಗೆ ವಿವಾಹ, ಪೋಷಕರ ಅಥವಾ ಸಂಗಾತಿಯ ನಿವಾಸದ ಹಿನ್ನೆಲೆ, ಸ್ಥಿರಾಸ್ತಿ ಹೊಂದಿರುವುದು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಸೇರಿದಂತೆ ವಿವಿಧ ಪ್ರಮುಖ ಅಂಶಗಳನ್ನು ಪರಿಶೀಲಿಸಿ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ನಾಗರಿಕರ ಅನುಕೂಲಕ್ಕಾಗಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಡಿಜಿಟಲ್ ಪ್ರಮಾಣಪತ್ರಗಳನ್ನು ವೆಬ್‌ಸೈಟ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರೊಂದಿಗೆ ಅಟಲ್ ಜನಸ್ನೇಹಿ ಕೇಂದ್ರಗಳು, ನಾಡಕಚೇರಿ, ಗ್ರಾಮ ಒನ್ ಹಾಗೂ ವಾಟ್ಸಾಪ್ ಮೂಲಕವೂ ಸುಲಭವಾಗಿ ಪ್ರಮಾಣಪತ್ರಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಅಥವಾ ತೊಂದರೆ ಎದುರಾದರೆ ನಾಗರಿಕರು ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮೇಲ್ಮನವಿ ಸಲ್ಲಿಸಿ ಮರುಪರಿಶೀಲನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.