image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕವಿಗೆ ಜಗತ್ತೇ ಬಳಗ: ನಾಗೇಂದ್ರ ಪ್ರಸಾದ್ ಬೆನ್ನುತಟ್ಟಿದ ಹಂಸಲೇಖ

ಕವಿಗೆ ಜಗತ್ತೇ ಬಳಗ: ನಾಗೇಂದ್ರ ಪ್ರಸಾದ್ ಬೆನ್ನುತಟ್ಟಿದ ಹಂಸಲೇಖ

ಬೆಂಗಳೂರು: ರಾಜನಿಗೆ ತನ್ನ ರಾಜ್ಯದಲ್ಲಿ ಮಾತ್ರ ಬಳಗವಿದ್ದರೆ, ಒಬ್ಬ ಕವಿಗೆ ಇಡೀ ಜಗತ್ತಿನಲ್ಲೇ ಬಳಗ ಇರಲಿದೆ ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ಚಲನಚಿತ್ರ ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ವೀರಲೋಕ ಪ್ರಕಾಶನವು ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಆಯೋಜಿಸಿದ್ದ 'ಕವಿರತ್ನ ಸಾರ್ಥಕ ಸುವರ್ಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ಕವಿರತ್ನ' ಬಿರುದಿನ ಮೂಲಕ ನಾಗೇಂದ್ರ ಪ್ರಸಾದ್‌ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಬಂದಿದೆ. ವಿಭಿನ್ನ ವಿಚಾರಧಾರೆಗಳನ್ನು ಹೊಂದಿರುವವರನ್ನು ಒಂದೇ ವೇದಿಕೆಯಲ್ಲಿ ತರುವ ಶಕ್ತಿ ಒಬ್ಬ ಸಾಹಿತಿ ಹಾಗೂ ಸಂಗೀತಗಾರನಿಗೆ ಮಾತ್ರ ಸಾಧ್ಯ. ನಾಗೇಂದ್ರ ಪ್ರಸಾದ್ ಅವರು ಮುಂದಿನ ಪರಂಪರೆಯ ಉತ್ತರಾಧಿಕಾರಿಯಾಗಿದ್ದು, ಅನುಭವಿ ಮತ್ತು ಪ್ರಭಾವಿ ಲೇಖಕರಾಗಿರುವ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಭವಿಷ್ಯ ಇದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಇವತ್ತಿನ ಕಾಲದಲ್ಲಿ ಅಸೂಯೆ ಜಾಸ್ತಿ ಇದೆ. ಇಂತಹ ಸಂದರ್ಭದಲ್ಲಿ ಹಂಸಲೇಖ ಅವರು ನಾಗೇಂದ್ರ ಪ್ರಸಾದ್ ಅವರನ್ನು ತಮ್ಮ 'ಉತ್ತರಾಧಿಕಾರಿ' ಎಂದು ಕರೆದಿರುವುದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ ಎಂದರು. ಇದೇ ವೇಳೆ ನಟ ಪುನೀತ್‌ ರಾಜ್‌ಕುಮಾರ್‌ ಕುರಿತು ನಾಗೇಂದ್ರ ಪ್ರಸಾದ್ ಕೇವಲ ಒಂದೇ ದಿನದಲ್ಲಿ ಬರೆದುಕೊಟ್ಟ ಜನಪ್ರಿಯ ಹಾಡನ್ನು ಅವರು ಸ್ಮರಿಸಿದರು. ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಸರಸ್ವತಿ ಪುತ್ರರಿದ್ದಂತೆ. ಅವರು ರಚಿಸಿದ ಗೀತೆಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿ ತುಂಬಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭವ್ಯ ಸಮಾರಂಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್, ನಟರಾದ ಶರಣ್, ಪ್ರೇಮ್, ನಟಿ ಪ್ರೇಮಾ, ನಟ ಗುರುದತ್ತ, ಲಹರಿ ಆಡಿಯೋದ ವೇಲು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ