image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಭೆಯಲ್ಲೇ ಡಿಸಿ ತರಾಟೆಗೆ ತೆಗೆದುಕೊಂಡ ಡಿಕೆಶಿ: ಬೋರ್‌ವೆಲ್ ದಂಧೆಗೆ ಬಿತ್ತು ಬ್ರೇಕ್!

ಸಭೆಯಲ್ಲೇ ಡಿಸಿ ತರಾಟೆಗೆ ತೆಗೆದುಕೊಂಡ ಡಿಕೆಶಿ: ಬೋರ್‌ವೆಲ್ ದಂಧೆಗೆ ಬಿತ್ತು ಬ್ರೇಕ್!

ಬೆಂಗಳೂರು: ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿದ ಅಧಿಕಾರಿಯೊಬ್ಬರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ರಾಜ್ಯದ ಬರ ಪರಿಸ್ಥಿತಿಯ ಕುರಿತು ಗಂಭೀರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ್ ಅವರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಇದನ್ನು ಗಮನಿಸಿ ಕೆಂಡಮಂಡಲರಾದ ಡಿಕೆಶಿ, ಸಭೆಯ ಮೇಲೆ ಆಸಕ್ತಿ ಇಲ್ಲದಿದ್ದರೆ ಹೊರಗಡೆ ಹೋಗಿ ಮಾತನಾಡುವಂತೆ ಖಡಕ್ ಆಗಿ ಹೇಳಿದರು. ಒಬ್ಬ ಜವಾಬ್ದಾರಿಯುತ ಜಿಲ್ಲಾಧಿಕಾರಿಯೇ ಹೀಗೆ ನಿರ್ಲಕ್ಷ್ಯ ವಹಿಸಿದರೆ ಕೆಳಗಿನ ಅಧಿಕಾರಿಗಳ ನಡವಳಿಕೆ ಹೇಗಿರಬಹುದು ಎಂದು ಪ್ರಶ್ನಿಸಿದ ಅವರು, ಇನ್ಮುಂದೆ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬರ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ ಉಪಮುಖ್ಯಮಂತ್ರಿಗಳು, ಬೋರ್‌ವೆಲ್ ದಂಧೆಗೆ ಬ್ರೇಕ್ ಹಾಕಲು ಹೊಸ ನಿಯಮ ಪ್ರಕಟಿಸಿದರು. ರಾಜ್ಯದಲ್ಲಿ ಇನ್ಮುಂದೆ ಹೊಸದಾಗಿ ಬೋರ್‌ವೆಲ್ ಕೊರೆಸುವಾಗ ಕಡ್ಡಾಯವಾಗಿ ಅದರ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಕೇವಲ ಕಾಗದದ ಮೇಲೆ ಸುಳ್ಳು ಕತೆ ಹೇಳಿದರೆ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಲ್ಲಾದರೂ ನಕಲಿ ಅಥವಾ ಬೋಗಸ್ ಬೋರ್‌ವೆಲ್ ಹಗರಣ ಪತ್ತೆಯಾದರೆ ಆಯಾ ಜಿಲ್ಲಾ ಪಂಚಾಯತ್ ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೇವಲ ಕಚೇರಿಯಲ್ಲಿ ಕುಳಿತು ಪೇಪರ್ ರಿಪೋರ್ಟ್ ನೀಡದೆ, ಅಧಿಕಾರಿಗಳು ಫೀಲ್ಡ್‌ಗೆ ಇಳಿದು ಕೆಲಸ ಮಾಡಿದ ವರದಿ ನೀಡಬೇಕು ಎಂದು ಅವರು ಸೂಚಿಸಿದರು. ರಾಜ್ಯದ 178 ತಾಲ್ಲೂಕುಗಳಲ್ಲಿ ಶೇಕಡಾ 60 ರಷ್ಟು ಭೀಕರ ಮಳೆ ಕೊರತೆ ಕಾಣಿಸಿಕೊಂಡಿದ್ದು, ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ವರದಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿ ಹಾಗೂ ಸಿಇಒಗಳು ತ್ವರಿತವಾಗಿ ಸಮಗ್ರ ಮಾಹಿತಿ ನೀಡಬೇಕು ಎಂದು ಆದೇಶಿಸಿದರು. ಇದೇ ವೇಳೆ ಗ್ರಾಮೀಣ ಭಾಗದ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಲಾ 1 ಕೋಟಿ ರೂಪಾಯಿ ಹೆಚ್ಚುವರಿ ಹಣ ಘೋಷಿಸಿದ ಡಿಕೆಶಿ, ಡಿಸಿಗಳು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೃಷಿ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ನಿರ್ದೇಶನ ನೀಡಿದರು.

Category
ಕರಾವಳಿ ತರಂಗಿಣಿ