image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ವಿ.ಸೋಮಣ್ಣ ಒತ್ತಾಯ

ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ವಿ.ಸೋಮಣ್ಣ ಒತ್ತಾಯ

ಬೆಂಗಳೂರು: ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯ ಶಿರಾ ಬಳಿ ನಿರ್ಮಿಸಬೇಕೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ. ಶಿರಾದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಪ್ರಗತಿಗೆ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿರುವ ಸೋಮಣ್ಣ, ಕಳೆದ ವರ್ಷದ ಮಾರ್ಚ್ 20ರಂದು ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಶಾಸಕರು ತಮಗೆ ಪತ್ರ ಬರೆದು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅದೇ ವರ್ಷದ ಏಪ್ರಿಲ್ 22ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದು ಈ ಭಾಗದ ಜನಪ್ರತಿನಿಧಿಗಳ ಒತ್ತಾಸೆಯನ್ನು ಅವರ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಈಗಾಗಲೇ ಕರ್ನಾಟಕ ರಾಜ್ಯವು ಬೆಂಗಳೂರು ಕೇಂದ್ರಿತವಾಗಿ ಅಭಿವೃದ್ಧಿ ಸಾಧಿಸಿದೆ. ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದ ಎಲ್ಲ ಭಾಗಗಳನ್ನು ಹಾಗೂ ನಗರಗಳನ್ನು ಸಶಕ್ತವಾಗಿ ಬೆಳೆಸುವುದು ಜನಪ್ರತಿನಿಧಿಗಳೆಲ್ಲರ ಜವಾಬ್ದಾರಿಯಾಗಿದೆ. ಆ ಹಿನ್ನೆಲೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಬೆಂಗಳೂರಿನ ಸಮೀಪವೇ ನಿರ್ಮಿಸಿದರೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಅಭಿವೃದ್ಧಿಗೆ ನ್ಯಾಯ ಸಂದಂತೆ ಆಗುವುದಿಲ್ಲ ಎಂದು ನುಡಿದಿದ್ದಾರೆ. ತುಮಕೂರಿನ ಶಿರಾ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯಕರ್ನಾಟಕ ಭಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ. ಶಿರಾದ ಸುತ್ತಮುತ್ತ ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ), ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಿವೆ. ರಾಷ್ಟ್ರೀಯ ಹೆದ್ದಾರಿ-48, 69, 544ಇ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಹೊಸ ರೈಲು ಮಾರ್ಗಗಳ ಸಾರಿಗೆ ಸಂಪರ್ಕ ಜಾಲವೂ ಬಲವಾಗಿದೆ ಎಂದು ವಿವರಿಸಿದ್ದಾರೆ.

ಅಲ್ಲದೆ, ಶಿರಾದಲ್ಲಿ ಹೆಚ್ಚಿನ ಪ್ರಮಾಣದ ಸರಕಾರಿ ಭೂಮಿ ಲಭ್ಯವಿದ್ದು, ಭದ್ರಾ ಮೇಲ್ದಂಡೆ ಕಾಲುವೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರಿನ ಲಭ್ಯತೆಯೂ ಇದೆ. ಇದರೊಂದಿಗೆ ಚಿತ್ರದುರ್ಗದ ಡಿಆರ್‍ಡಿಒ, ಐಐಎಸ್ಸಿ ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯ ಎಚ್‍ಎಎಲ್ ಹೆಲಿಕಾಪ್ಟರ್ ಘಟಕಗಳೂ ಅತ್ಯಂತ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ. ಶಿರಾದ ಈ ಸ್ಥಳವು ಡಿಜಿಸಿಎಯ ನಿಯಮಕ್ಕನುಗುಣವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 150 ಕಿ.ಮೀ ದೂರದಲ್ಲಿದೆ. ಇದರಿಂದಾಗಿ ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಅಂತರ್‍ರಾಷ್ಟ್ರೀಯ ಪ್ರಯಾಣ ಹಾಗೂ ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದೆ. ಒಟ್ಟಾರೆಯಾಗಿ ಕೈಗಾರಿಕೆ, ಉದ್ಯೋಗ, ಹೂಡಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಲಿದ್ದು, ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಸಚಿವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ