ಹುಬ್ಬಳ್ಳಿ : ರಾಜ್ಯದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಚಲಿಸುವ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಪಾನ್‌ಮಸಾಲ ಉಗಿಯಲು ಅಥವಾ ಮೋಜಿಗೆ ತಲೆ, ಕೈ ಹೊರಗೆ ಹಾಕುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಇತ್ತೀಚೆಗೆ ಕುಂದಗೋಳ ತಾಲೂಕಿನ ಶರೇವಾಡ ಬಳಿ ಕಿಟಕಿ ಸರಳುಗಳಿಲ್ಲದ ಬಸ್ಸಿನಿಂದ ತಲೆ ಹೊರಹಾಕಿದ್ದ ವಿದ್ಯಾರ್ಥಿಯೊಬ್ಬನಿಗೆ ಟಿಪ್ಪರ್ ಡಿಕ್ಕಿಯಾಗಿ ರುಂಡ ಕತ್ತರಿಸಿದ ಭೀಕರ ದುರ್ಘಟನೆ ನಡೆದಿತ್ತು. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ, ಸಾರ್ವಜನಿಕ ಬಸ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಪಘಾತಗಳ ತಡೆಗೆ ಎಲ್ಲ ಸಾರಿಗೆ ನಿಗಮಗಳ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಸಾರಿಗೆ ಸಚಿವರು ಕಠಿಣ ನಿಯಮಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಇನ್ಮುಂದೆ ಬಸ್‌ಗಳಲ್ಲಿ ಗುಟ್ಕಾ, ತಂಬಾಕು ಜಗಿದು ಕಿಟಕಿಯಿಂದ ಹೊರಗೆ ಉಗಿಯುವವರ ಹಾಗೂ ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರಿಗೆ ಕಿಟಕಿಯಿಂದ ಕೈ, ತಲೆ ಹೊರಗೆ ಹಾಕದಂತೆ ಹಾಗೂ ಮಕ್ಕಳನ್ನು ಕಿಟಕಿ ಪಕ್ಕ ಕೂರಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಮುಖ್ಯವಾಗಿ, ರಾಜ್ಯದ ಬಹುತೇಕ ಹಳೆಯ ಬಸ್‌ಗಳಲ್ಲಿ ಕಿಟಕಿಗಳಿಗೆ ಕಬ್ಬಿಣದ ಸರಳುಗಳು ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿರುವುದರಿಂದ, ಇನ್ಮುಂದೆ ಎಲ್ಲ ಸರ್ಕಾರಿ ಬಸ್‌ಗಳ ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸುವ ಕಾರ್ಯ ಬಿರುಸಿನಿಂದ ಸಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾ) ವ್ಯಾಪ್ತಿಯಲ್ಲಿರುವ ಒಟ್ಟು 5300ಕ್ಕೂ ಹೆಚ್ಚು ಬಸ್‌ಗಳ ಪೈಕಿ, ಹೊಸ ಬಸ್‌ಗಳನ್ನು ಹೊರತುಪಡಿಸಿ ಕಿಟಕಿ ಸರಳುಗಳಿಲ್ಲದ ಉಳಿದ ಹಳೆಯ ಬಸ್‌ಗಳಿಗೆ ಡಬಲ್ ಕಬ್ಬಿಣದ ಸರಳುಗಳನ್ನು ಅಳವಡಿಸುವ ಪ್ರಕ್ರಿಯೆ ಡಿಪೋ ಮಟ್ಟದಲ್ಲಿ ವೇಗವಾಗಿ ನಡೆಯುತ್ತಿದೆ.