image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಾಗಲಕೋಟೆಯಲ್ಲಿ ಪೈಪ್‌ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲು: ರೈತರ ಆಕ್ರೋಶ

ಬಾಗಲಕೋಟೆಯಲ್ಲಿ ಪೈಪ್‌ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲು: ರೈತರ ಆಕ್ರೋಶ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಸಮೀಪ ಶುಕ್ರವಾರ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಪೈಪ್ ಲೈನ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ. ಪೈಪ್ಲೈನ್ ಒಡೆದ ತೀವ್ರತೆಗೆ ನೀರು ಆಕಾಶದ ಎತ್ತರಕ್ಕೆ ಚಿಮ್ಮಿ ಹರಿದಿದ್ದು, ಈ ದೃಶ್ಯ ಸ್ಥಳೀಯರನ್ನು ಕೆಲಕಾಲ ಬೆಚ್ಚಿಬೀಳುವಂತೆ ಮಾಡಿತು. ಈಗಾಗಲೇ ಭೀಕರ ಬರಗಾಲದ ಸಂಕಷ್ಟ ಎದುರಿಸುತ್ತಿರುವ ಈ ಭಾಗದಲ್ಲಿ, ಲಕ್ಷಾಂತರ ಲೀಟರ್ ಅಮೂಲ್ಯ ನೀರು ಹೀಗೆ ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಾವರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ತಮಗೆ ಇಂತಹ ಕಷ್ಟದ ಸಮಯದಲ್ಲಿ ನೀರನ್ನು ಸಂರಕ್ಷಿಸುವ ಬದಲು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರು ಪೋಲಾಗುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ರೈತರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ರೈತರು ಮತ್ತು ಗ್ರಾಮಸ್ಥರು, ಇಷ್ಟೊಂದು ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಯಾವುದೇ ತಕ್ಷಣದ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಪೈಪ್ಲೈನ್ ದುರಸ್ತಿ ಮಾಡಿ ನೀರಿನ ಸೋರಿಕೆಯನ್ನು ನಿಯಂತ್ರಿಸುವಂತೆ ಅವರು ಒತ್ತಾಯಿಸಿದರು.

ಏತ ನೀರಾವರಿ ಯೋಜನೆಗಳ ಸಮರ್ಪಕ ನಿರ್ವಹಣೆಯಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ನೀರಿನ ಕೊರತೆಯಿಂದ ಕೃಷಿ ಸಂಪೂರ್ಣ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿರುವ ಸ್ಥಳೀಯರು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ