image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಿಬಿಎ ಚುನಾವಣೆ: ಡಿಸೆಂಬರ್ 31ರೊಳಗೆ ನಡೆಸಲು ಸುಪ್ರೀಂ ಕೋರ್ಟ್ ಗಡುವು

ಜಿಬಿಎ ಚುನಾವಣೆ: ಡಿಸೆಂಬರ್ 31ರೊಳಗೆ ನಡೆಸಲು ಸುಪ್ರೀಂ ಕೋರ್ಟ್ ಗಡುವು

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ನಡೆಸಲು ಕಾಲಾವಕಾಶ ಕೋರಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಈ ವರ್ಷದ ಡಿಸೆಂಬರ್ 31ರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಅಂತಿಮ ಗಡುವು ನೀಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ, ಕರಡು ಮತದಾರರ ಪಟ್ಟಿ ಪ್ರಕಟಣೆ ಹಾಗೂ ಸಾರ್ವಜನಿಕ ಆಕ್ಷೇಪಣೆ ಸ್ವೀಕಾರ ಸೇರಿದಂತೆ ನಾನಾ ಅಧಿಕೃತ ಕಾರ್ಯಗಳಲ್ಲಿ ಸಿಬ್ಬಂದಿ ನಿರತರಾಗಿರುವ ಕಾರಣ ಚುನಾವಣೆ ನಡೆಸಲು ಹೆಚ್ಚಿನ ಸಮಯ ಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು ಸರ್ಕಾರದ ಮನವಿಗೆ ಅಸ್ತು ಎಂದಿದೆ. ಆದರೆ, ಡಿಸೆಂಬರ್‌ನಲ್ಲಿ ಪುನಃ ಹೊಸ ಕಾರಣಗಳನ್ನು ಮುಂದು ಮಾಡಿ ಕಾಲಾವಕಾಶ ಕೇಳಿಕೊಂಡು ಬರುವಂತಿಲ್ಲ ಎಂದು ನ್ಯಾಯಪೀಠವು ಖಡಾಖಂಡಿತವಾಗಿ ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಇಲ್ಲದಿದ್ದರೆ ಆಗಸ್ಟ್ 31ರೊಳಗೆ ಚುನಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಿಬ್ಬಂದಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿರುವ ಕಾರಣ ಕಾಲಾವಕಾಶ ವಿಸ್ತರಿಸಬೇಕು ಎಂದು ಕೋರಿದರು. ಜನವರಿ ವೇಳೆಗೆ ಚುನಾವಣೆ ನಡೆಸಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಸರ್ಕಾರ ತಿಳಿಸಿದೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ಆದೇಶದಿಂದಾಗಿ ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳ ಚುನಾವಣೆ ಇದೇ ವರ್ಷದ ಡಿಸೆಂಬರ್ 31ರೊಳಗೆ ಮುಕ್ತಾಯಗೊಳ್ಳಬೇಕಾಗಿದೆ.

Category
ಕರಾವಳಿ ತರಂಗಿಣಿ