image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆದಾಯ ಕೊರತೆ : ಕೆಕೆಆರ್‌ಟಿಸಿ 35 ಅಂತಾರಾಜ್ಯ ಬಸ್ ಸೇವೆ ಸ್ಥಗಿತ

ಆದಾಯ ಕೊರತೆ : ಕೆಕೆಆರ್‌ಟಿಸಿ 35 ಅಂತಾರಾಜ್ಯ ಬಸ್ ಸೇವೆ ಸ್ಥಗಿತ

ರಾಯಚೂರು : ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್‌ಟಿಸಿ) ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳಿಗೆ ತೆರಳುತ್ತಿದ್ದ ಬರೋಬ್ಬರಿ 35 ಮಾರ್ಗಗಳ ಅಂತಾರಾಜ್ಯ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಶಿಕ್ಷಣ, ಉದ್ಯೋಗ, ಪ್ರವಾಸ ಹಾಗೂ ವ್ಯಾಪಾರ ನಿಮಿತ್ತ ನಿತ್ಯ ನೆರೆ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದ ಸಾವಿರಾರು ಜನರಿಗೆ ಇದರಿಂದ ಭಾರಿ ತೊಂದರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಪ್ರಸ್ತುತ ಕೆಕೆಆರ್‌ಟಿಸಿಗೆ ಒಟ್ಟು 104 ಅಂತಾರಾಜ್ಯ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲು ಪರವಾನಗಿ ಇದೆ. ಆದರೆ, ಸದ್ಯ 69 ಮಾರ್ಗಗಳಲ್ಲಿ ಮಾತ್ರ ಬಸ್‌ಗಳು ಸಂಚರಿಸುತ್ತಿದ್ದು, ಉಳಿದ 35 ಮಾರ್ಗಗಳ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತ ಬಂದಿದ್ದು, ದಿನಿತ್ಯದ ನಿರ್ವಹಣಾ ಖರ್ಚಿಗಿಂತ ಆದಾಯ ತೀರಾ ಕಡಿಮೆಯಾಗಿರುವುದರಿಂದ ಸಂಸ್ಥೆಯು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಗಿತಗೊಂಡಿರುವ ಮಾರ್ಗಗಳ ಪೈಕಿ ಮಹಾರಾಷ್ಟ್ರದ ಪುಣೆಗೆ 6, ಸೊಲ್ಲಾಪುರ, ಮೀರಜ್‌, ಕೊಲ್ಲಾಪುರ ಹಾಗೂ ಉದಗಿರ್‌ಗೆ ತಲಾ 2 ರಂತೆ ಒಟ್ಟು 14 ಬಸ್‌ಗಳ ಸೇವೆ ಬಂದ್ ಆಗಿದೆ. ಗೋವಾ ರಾಜ್ಯದ ಪಣಜಿಗೆ 8 ಹಾಗೂ ವಾಸ್ಕೊಗೆ 2 ಮಾರ್ಗಗಳ ಒಟ್ಟು 10 ಬಸ್‌ಗಳು ಸ್ಥಗಿತಗೊಂಡಿವೆ. ಇನ್ನು ತೆಲಂಗಾಣದ ಐಜ್‌, ಮಖ್ತಲ್‌ ಕಡೆಗೆ ಸಂಚರಿಸುತ್ತಿದ್ದ 5 ಬಸ್‌ಗಳು ಹಾಗೂ ಆಂಧ್ರಪ್ರದೇಶದ ಉರುಕುಂದ ಸೇರಿದಂತೆ ಒಟ್ಟು 4 ಮಾರ್ಗಗಳ ಬಸ್‌ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕೋವಿಡ್‌ ಅವಧಿಗಿಂತ ಮುಂಚೆ ಈ ಅಂತಾರಾಜ್ಯ ಬಸ್‌ಗಳಿಂದ ಸಂಸ್ಥೆಗೆ ಉತ್ತಮ ಆದಾಯ ಬರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದಂತೆಯೇ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದು ಕೂಡ ಆದಾಯ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದರೊಂದಿಗೆ ನಮ್ಮ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬಸ್‌ ವ್ಯವಸ್ಥೆ ಇರುವುದರಿಂದ ಬೇಡಿಕೆಗೆ ತಕ್ಕಂತೆ ಸ್ಥಳೀಯವಾಗಿ ಹೆಚ್ಚು ಸೇವೆ ನೀಡಲು ಸಂಸ್ಥೆ ಆದ್ಯತೆ ನೀಡಬೇಕಾಗಿದೆ.

ಅಂತಾರಾಜ್ಯ ಬಸ್‌ ಸೇವೆ ನಿಂತಿರುವುದರಿಂದ ಪ್ರಯಾಣಿಕರು ಈಗ ಹೈದರಾಬಾದ್‌, ಕಲಬುರಗಿ, ವಿಜಯಪುರ ಸೇರಿದಂತೆ ಇತರ ನಗರಗಳ ಮೂಲಕ ಪರ್ಯಾಯ ಬಸ್‌ ಅಥವಾ ರೈಲು ಸಂಪರ್ಕಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ಪರದಾಡುವಂತಾಗಿದ್ದು, ಸಾರಿಗೆ ಸಂಸ್ಥೆಯು ಪ್ರಯಾಣಿಕರ ಬೇಡಿಕೆ ಹಾಗೂ ಆದಾಯದ ಸಾಧ್ಯತೆಗಳನ್ನು ಮರು ಪರಿಶೀಲಿಸಿ ಪ್ರಮುಖ ಅಂತಾರಾಜ್ಯ ಮಾರ್ಗಗಳಲ್ಲಿ ತಕ್ಷಣವೇ ಬಸ್‌ ಸೇವೆಗಳನ್ನು ಪುನರಾರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ