image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈತ್ರಿ ಬಿಟ್ಟು ಬನ್ನಿ, 120 ಸ್ಥಾನ ಗೆದ್ದು ತೋರಿಸಿ: ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು

ಮೈತ್ರಿ ಬಿಟ್ಟು ಬನ್ನಿ, 120 ಸ್ಥಾನ ಗೆದ್ದು ತೋರಿಸಿ: ಎಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಧೈರ್ಯವಿದ್ದರೆ ಬಿಜೆಪಿ ಮೈತ್ರಿ ತೊರೆದು ಏಕಾಂಗಿಯಾಗಿ ಸ್ಪರ್ಧಿಸಿ 120 ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇತಿಹಾಸದಲ್ಲಿ ಅದೂ ಒಂದು ದಾಖಲೆಯಾಗಿ ಹೋಗಲಿ. ಕುಮಾರಸ್ವಾಮಿ ಅವರು ಮೈತ್ರಿ ಬಿಟ್ಟು ಹೊರಬಂದು, ವಿಧಾನಸೌಧದ ಮುಂದೆ ನಿಂತು ನಾನು ಏಕಾಂಗಿಯಾಗಿ 120 ಸ್ಥಾನ ಗೆಲ್ಲುತ್ತೇನೆ ಎಂದು ಘೋಷಿಸಲಿ. ಒಂದು ವೇಳೆ ಅವರು ಅಷ್ಟು ಸ್ಥಾನಗಳನ್ನು ಗೆದ್ದು ತೋರಿಸಿದರೆ ನಾವೇ ಅವರಿಗೆ ಸೆಲ್ಯೂಟ್ ಹೊಡೆದು ಸರೆಂಡರ್ ಆಗುತ್ತೇವೆ. ಅದನ್ನು ಬಿಟ್ಟು ಬಿಜೆಪಿ ಜೊತೆಗಿದ್ದುಕೊಂಡು 20 ಸೀಟು ಗೆಲ್ಲುವುದರಲ್ಲಿ ಯಾವ ಗ್ರೇಟ್‌ನೆಸ್ ಇದೆ?" ಎಂದು ಪ್ರಶ್ನಿಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಮಗನನ್ನು ನೋಡಿ ಕಲಿಯುವಂತೆ ಸಲಹೆ ನೀಡಿದ ಚಲುವರಾಯಸ್ವಾಮಿ, "ದೇವೇಗೌಡರ ಮಗನಾಗಿ ನಿಮ್ಮ ಸಾಧನೆ ಆದರೂ ಏನು? ಇನ್ನು ಮುಂದೆಯಾದರೂ ಗೌರವದಿಂದ ಮಾತನಾಡುವುದನ್ನು ಕಲಿಯಿರಿ ಮಿಸ್ಟರ್ ಕುಮಾರಸ್ವಾಮಿ. ನಮಗೆ ನಿಮ್ಮ ಅಭಿನಂದನೆಯೂ ಬೇಡ, ಸರ್ಟಿಫಿಕೇಟೂ ಬೇಡ. ನಿಮ್ಮ ಸಹೋದರ ರೇವಣ್ಣ ಅವರಿಗೆ ಇರುವ ಒಳ್ಳೆಯ ಮನಸ್ಸು ಕೂಡ ನಿಮಗಿಲ್ಲ" ಎಂದು ಆಕ್ರೋಶ ಹೊರಹಾಕಿದರು. ಕುಮಾರಸ್ವಾಮಿ ಅವರ ರಾಜಕೀಯ ನಡೆಗಳನ್ನು ಟೀಕಿಸಿದ ಅವರು, "ರಾಜ್ಯದಲ್ಲಿ ಮೊದಲ ಬಾರಿ ಆಪರೇಷನ್ ಕಮಲದ ಹರಿಕಾರರಾಗಿದ್ದೇ ಕುಮಾರಸ್ವಾಮಿ. ನೀವು ಹೇಗೆ ಮುಖ್ಯಮಂತ್ರಿಯಾದಿರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ನೀವು ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸಿಎಂ ಆಗಿದ್ದಿರಾ? ನಿಮ್ಮ ಸ್ವಂತ ನಾಯಕತ್ವದಲ್ಲಿ ಜೆಡಿಎಸ್ ಎಂದಿಗೂ 37 ಸ್ಥಾನಗಳಿಗಿಂತ ಹೆಚ್ಚು ಗೆದ್ದಿಲ್ಲ. ಆದರೆ ಡಿಕೆ ಶಿವಕುಮಾರ್ ಸಂವಿಧಾನಬದ್ಧವಾಗಿ ಆಯ್ಕೆಯಾಗಿದ್ದಾರೆ. ಅವರು ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಆದರೆ ನಿಮಗೆ ಅವರ ಏಳಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ನಿರಂತರವಾಗಿ ಹೊಟ್ಟೆಕಿಚ್ಚಿನ ಮಾತನಾಡುತ್ತಿದ್ದೀರಿ" ಎಂದು ಕಿಡಿಕಾರಿದರು.

ಹಿಂದೆ ಆರ್‌ಎಸ್‌ಎಸ್ ಹಾಗೂ ನರೇಂದ್ರ ಮೋದಿ ಅವರನ್ನು ಬೈಯ್ಯುತ್ತಿದ್ದ ಕುಮಾರಸ್ವಾಮಿ, ಈಗ ಅಧಿಕಾರಕ್ಕಾಗಿ ಅವರನ್ನೇ ಹೊಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಚಲುವರಾಯಸ್ವಾಮಿ, "ಹಿರಿಯ ಒಕ್ಕಲಿಗ ನಾಯಕ ಎಸ್.ಎಂ. ಕೃಷ್ಣ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನೇ ತಪ್ಪಿಸಿದವರು ನೀವು. ಇನ್ನು ಮತ್ತೊಬ್ಬ ಒಕ್ಕಲಿಗ ನಾಯಕರಾದ ಡಿ.ಕೆ. ಶಿವಕುಮಾರ್ ಅವರನ್ನು ನೀವು ಒಪ್ಪಿಕೊಳ್ಳಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

Category
ಕರಾವಳಿ ತರಂಗಿಣಿ