image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸ್ಪರ್ಧಾತ್ಮಕ ಪರೀಕ್ಷೆಯ ಸೋಲು ಬದುಕಿನ ಅಂತ್ಯವಲ್ಲ: ಡಾ. ಸಿ.ಟಿ. ರವಿ ಕರೆ

ಸ್ಪರ್ಧಾತ್ಮಕ ಪರೀಕ್ಷೆಯ ಸೋಲು ಬದುಕಿನ ಅಂತ್ಯವಲ್ಲ: ಡಾ. ಸಿ.ಟಿ. ರವಿ ಕರೆ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗಾಗಿ ಆಯೋಜಿಸಿದ್ದ "ಉದ್ಯೋಗ ಸಂಕಲ್ಪ" ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎದುರಾಗುವ ಒಂದೇ ಒಂದು ವಿಫಲತೆಯನ್ನು ಜೀವನದ ಅಂತಿಮ ಸೋಲು ಎಂದು ಭಾವಿಸದೆ, ಅಭ್ಯರ್ಥಿಗಳು ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದೊಂದಿಗೆ ದೊಡ್ಡ ಕನಸುಗಳನ್ನು ಬೆನ್ನಟ್ಟಬೇಕು ಎಂದು ಅವರು ಕರೆ ನೀಡಿದರು.

ಪರೀಕ್ಷೆಗಳನ್ನು ಅತ್ಯಂತ ಕಠಿಣವೆಂದು ಭಾವಿಸಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆರಂಭದಲ್ಲಿ ಯಾವುದೇ ವಿಷಯ ಕಷ್ಟವೆನಿಸಿದರೂ, ಅದರ ಸಿದ್ಧತೆಯ ಕ್ರಮ ಮತ್ತು ಸೂತ್ರಗಳನ್ನು ಅರ್ಥಮಾಡಿಕೊಂಡು ಎದುರಿಸಿದರೆ ಯಶಸ್ಸು ಸುಲಭವಾಗುತ್ತದೆ. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪೈಲಟ್ ಪರೀಕ್ಷೆಯಲ್ಲಿ ವಿಫಲರಾದರೂ ಧೃತಿಗೆಡದೆ ಶ್ರೇಷ್ಠ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಬೆಳೆದದ್ದೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಬದುಕಿನಲ್ಲಿ ಒಂದು ಅವಕಾಶ ಕೈತಪ್ಪಿದರೆ ಎಲ್ಲವೂ ಮುಗಿಯುವುದಿಲ್ಲ, ದೇವರು ಪ್ರತಿಯೊಬ್ಬರಿಗೂ ಮತ್ತೊಂದು ದಾರಿಯನ್ನು ತೆರೆದಿಟ್ಟಿರುತ್ತಾನೆ ಎಂದು ಅವರು ಕಿವಿಮಾತು ಹೇಳಿದರು.

ಯುವಕರು ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಪ್ರತಿದಿನ ಶ್ರಮಿಸಬೇಕು. ಎವರೆಸ್ಟ್ ಶಿಖರವನ್ನು ಯಾರೂ ಒಂದೇ ದಿನದಲ್ಲಿ ಏರಲು ಸಾಧ್ಯವಿಲ್ಲ, ಒಂದೊಂದು ಹೆಜ್ಜೆಯಾಗಿ ಇಡುತ್ತಾ ಶಿಖರ ತಲುಪುವಂತೆ ಯಶಸ್ಸು ಕೂಡ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆ. ಯಶಸ್ಸು ಗಳಿಸಿದ ಬಳಿಕ ಅಹಂಕಾರಕ್ಕೆ ಒಳಗಾಗದೆ ವಿನಯದಿಂದ ಬದುಕಬೇಕು ಎಂದು ಅವರು ತಿಳಿಸಿದರು. ಇದೇ ವೇಳೆ ಚಿಕ್ಕಮಗಳೂರಿನ ಯುವಕರಿಗಾಗಿ ಉಚಿತ ತರಬೇತಿ ನೀಡುತ್ತಿರುವ ವಿ-ಶೈನ್ ಕೋಚಿಂಗ್ ಸೆಂಟರ್‌ನ ರೂವಾರಿ ಕಿಶೋರ್ ಕುಮಾರ್ ಹೆಗಡೆ ಅವರ ಸಮಾಜಸೇವೆಯನ್ನು ಶ್ಲಾಘಿಸಿದ ರವಿ ಅವರು, ಸಣ್ಣ ಮೊಟ್ಟೆ ಅಂಗಡಿಯಿಂದ ಆರಂಭಿಸಿ ಅಂತರರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿ ಬೆಳೆದಿರುವ ಕಿಶೋರ್ ಅವರ ಬದುಕು ಯುವಕರಿಗೆ ದೊಡ್ಡ ಸ್ಫೂರ್ತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ, ಲೈಫ್ ಲೈನ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅರ್ಜುನ್ ಹೆಗ್ಡೆ, ನಗರಸಭಾ ಅಧ್ಯಕ್ಷೆ ಭವ್ಯ ಮಂಜುನಾಥ್, ಹಿರಿಯ ಮುಖಂಡ ಕೋಟೆ ರಂಗನಾಥ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ