ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಯುವತಿಯೊಬ್ಬಳನ್ನು ಹೆತ್ತ ಪೋಷಕರೇ ಹಣಕ್ಕಾಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ದಂಪತಿಯ 20 ವರ್ಷದ ಪುತ್ರಿ ನಂದಿತಾ ಈ ದಂಧೆಗೆ ಬಲಿಯಾದ ದುರ್ದೈವಿ. ಸುಮಾರು ನಾಲ್ಕು ತಿಂಗಳ ಹಿಂದೆ ಸಾಂಪ್ರದಾಯಿಕ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಪೋಷಕರು ಮಗಳನ್ನು ಸೆನೆಗಲ್‌ಗೆ ಕರೆದೊಯ್ದಿದ್ದರು ಎನ್ನಲಾಗಿದೆ.
ಆದರೆ, ಸುಮಾರು 10 ದಿನಗಳ ಹಿಂದೆ ತೀವ್ರ ಹಣದ ಆಸೆಗೆ ಬಿದ್ದ ಪೋಷಕರು ಮಗಳನ್ನು ಅಲ್ಲಿನ ದಂಧೆಕೋರರಿಗೆ ಬರೋಬ್ಬರಿ 7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಗಳನ್ನು ದಂಧೆಗೆ ತಳ್ಳಿದ ಬಳಿಕ ಭಾರತಕ್ಕೆ ಮರಳಿದ್ದ ಪೋಷಕರು, "ಮಗಳು ತಮಗಿಂತ ಮೊದಲೇ ಊರಿಗೆ ಮರಳಿದ್ದಾಳೆ" ಎಂದು ಸಂಬಂಧಿಕರ ಬಳಿ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು. ಆದರೆ ವಿದೇಶದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಯುವತಿ ಧೈರ್ಯಗೆಡದೆ, ಕಷ್ಟಪಟ್ಟು ಸೆನೆಗಲ್‌ನಿಂದಲೇ ತನ್ನ ಪರಿಚಯಸ್ಥರನ್ನು ಸಂಪರ್ಕಿಸಿ ತಂದೆ-ತಾಯಿಯೇ ತನ್ನನ್ನು ಮಾರಾಟ ಮಾಡಿರುವ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಅಲ್ಲದೆ, ತನಗೆ ಆಗುತ್ತಿರುವ ಅನ್ಯಾಯದ ಕುರಿತು ವಿಡಿಯೋ ಸಂದೇಶವನ್ನೂ ರವಾನಿಸಿದ್ದಾಳೆ.
ಈ ಆಘಾತಕಾರಿ ವಿಡಿಯೋ ಊರಿನವರ ಕೈಸೇರುತ್ತಿದ್ದಂತೆ ಎಚ್ಚೆತ್ತ ಮುಖಂಡರು ಭಾರತೀಯ ರಾಯಭಾರ ಕಚೇರಿಯನ್ನು (Indian Embassy) ಸಂಪರ್ಕಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರಾಯಭಾರ ಕಚೇರಿ ಅಧಿಕಾರಿಗಳು, ಸೆನೆಗಲ್‌ನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇತ್ತ ಮಗಳ ರಕ್ಷಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪೋಷಕರು ಸದ್ದಿಲ್ಲದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.
ಈ ಅಮಾನುಷ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು, ಜುಲೈ 15ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ಅಧಿಕೃತ ದೂರು ಪತ್ರ ಸಲ್ಲಿಸಿದೆ. ಗಿಡಮೂಲಿಕೆ ವ್ಯಾಪಾರದ ಹೆಸರಲ್ಲಿ ಹೆತ್ತ ಮಗಳನ್ನೇ ವಿದೇಶದಲ್ಲಿ ಮಾರಾಟ ಮಾಡಿರುವ ಕೃತ್ಯ ಇಡೀ ಹಕ್ಕಿಪಿಕ್ಕಿ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗಿದ್ದು, ಸಮಾಜದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೇರಿದಂತೆ ಅನ್ವಯವಾಗುವ ಕಠಿಣ ಕಾನೂನುಗಳಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಲಾಗಿದೆ.