image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ: ತಾಂತ್ರಿಕ ಸವಾಲುಗಳ ಮಧ್ಯೆ ಉದ್ದೇಶಿತ ಪ್ರದೇಶಗಳಿಗೆ ನೀರು ಹರಿಸಲು ಸಿದ್ಧತೆ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ: ತಾಂತ್ರಿಕ ಸವಾಲುಗಳ ಮಧ್ಯೆ ಉದ್ದೇಶಿತ ಪ್ರದೇಶಗಳಿಗೆ ನೀರು ಹರಿಸಲು ಸಿದ್ಧತೆ

ತುಮಕೂರು : ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳು ಹಾಗೂ ಟಿ.ಜಿ ಹಳ್ಳಿ, ಹೆಸರುಘಟ್ಟ ಜಲಾಶಯಗಳು ಮತ್ತು ದೇವನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಚಾಲನೆ ದೊರೆತು 10 ವರ್ಷಗಳೇ ಕಳೆದಿವೆ. 2014ರಲ್ಲಿ ಆರಂಭಗೊಂಡು 2024ರಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದರೂ, ಅರಸೀಕೆರೆ ಮತ್ತು ತುಮಕೂರು ಸಮೀಪದ ತಲಾ ಮೂರು ಕಿಲೋಮೀಟರ್ ಕಾಮಗಾರಿ ಬಾಕಿ ಉಳಿದಿದ್ದರಿಂದ ನೀರನ್ನು ಕಾಗೆ ಹಳ್ಳದ ಮೂಲಕ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ತಾತ್ಕಾಲಿಕವಾಗಿ ಹರಿಸಲಾಗುತ್ತಿತ್ತು. ಸದ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ವಿಶೇಷ ಪ್ರಯತ್ನದಿಂದ ಅರಣ್ಯ ಇಲಾಖೆಯ ಸಮಸ್ಯೆಗಳು ಬಗೆಹರಿದಿದ್ದು, ಅರಸೀಕೆರೆ ತಾಲೂಕಿನ ಐದಳ್ಳ ಕಾವಲಿನ 2.5 ಕಿ.ಮೀ. ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಬಾಕಿ ಇರುವ 500 ಮೀಟರ್ ಜಮೀನಿನ ಅನಧಿಕೃತ ಸಾಗುವಳಿ ಪರಿಹಾರದ ವಿಚಾರ ಸದ್ಯ ಸರ್ಕಾರದ ಮುಂದಿದ್ದು, ಜುಲೈ ಅಂತ್ಯದೊಳಗೆ ಸಮಸ್ಯೆ ಬಗೆಹರಿದು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇತ್ತ ತುಮಕೂರು ಜಿಲ್ಲೆಯ 3 ಕಿ.ಮೀ. ಕಾಮಗಾರಿ ಕೂಡ ಮುಕ್ತಾಯಗೊಂಡು ಕಾಲುವೆ ನೀರು ಹರಿಯಲು ಸಜ್ಜಾಗಿದೆ.

ಉದ್ದೇಶಿತ ಪ್ರದೇಶಗಳಿಗೆ ನೀರು ಹರಿಸಲು ಸದ್ಯ ಕಾಲುವೆಯು ಪ್ರತಿ ಸೆಕೆಂಡ್‌ಗೆ 3,000 ಕ್ಯುಸೆಕ್ ನೀರು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ಕೇವಲ 4 ರಿಂದ 5 ಬಾರಿ ಮಾತ್ರ ಈ ಗರಿಷ್ಠ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಉತ್ತಮ ಮಳೆಯಾದಲ್ಲಿ 1,500 ರಿಂದ 2,000 ಕ್ಯುಸೆಕ್ ನೀರು ಹರಿಯುವುದು ಸಾಮಾನ್ಯ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯಡಿ ಎತ್ತಿನಹೊಳೆ ಅಚ್ಚುಕಟ್ಟು ಪ್ರದೇಶದಿಂದ ಹೆಬ್ಬನಹಳ್ಳಿವರೆಗೆ ಒಟ್ಟು 126 ಕಿ.ಮೀ. ಉದ್ದದ ಪೈಪ್‌ಲೈನ್ ಮೂಲಕ ನೀರು ಹರಿಯಲಿದ್ದು, ಆ ಬಳಿಕ ತೆರೆದ ಕಾಲುವೆ ಸಂಪರ್ಕಿಸಲಿದೆ.

ಆದರೆ, ಈ ಪೈಪ್‌ಲೈನ್‌ಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಜಾಯಿಂಟ್ ವಿಫಲತೆ ಮತ್ತು ಸೋರಿಕೆ ಎಂಜಿನಿಯರ್‌ಗಳಿಗೆ ದೊಡ್ಡ ತಲೆನೋವಾಗಿದೆ. 2024ರ ಪ್ರಾಯೋಗಿಕ ಚಾಲನೆಯ ವೇಳೆ ಹಾರ್ಲೇ ಕೂಡಿಗೆ, ದೇಖ್ಲಾ, ಕಾಡುಮನೆ ಹಾಗೂ ಹೆಬ್ಬಸಾಲೆ ಗ್ರಾಮಗಳ ಬಳಿ ಮ್ಯಾನ್‌ಹೋಲ್ ಮತ್ತು ಕೀಹೋಲ್‌ಗಳು ತೆರೆದುಕೊಂಡು ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ನೀರು ನುಗ್ಗಿ ಭಾರಿ ನಷ್ಟ ಉಂಟುಮಾಡಿತ್ತು. ನಂತರದ ದಿನಗಳಲ್ಲಿ ಈ ಲೋಪಗಳನ್ನು ಸರಿಪಡಿಸಲಾಗಿದ್ದರೂ, ಜುಲೈ ತಿಂಗಳಿನಲ್ಲಿ ಬೈಕೆರೆ ಹಾಗೂ ಹಲುಸುಲಿಗೆ ಗ್ರಾಮದ ಸಮೀಪ ಪೈಪ್‌ಗಳ ಮಧ್ಯದ ಜಾಯಿಂಟ್‌ಗಳು ವಿಫಲಗೊಂಡು ಮತ್ತೆ ನೀರು ಸೋರಿಕೆಯಾಗಿದೆ.

ಸದ್ಯ ಎತ್ತಿನಹೊಳೆಯ 8 ಚೆಕ್ ಡ್ಯಾಮ್‌ಗಳಲ್ಲಿ 2,000 ದಿಂದ 16,000 ಎಚ್.ಪಿ ಸಾಮರ್ಥ್ಯದ 20ಕ್ಕೂ ಹೆಚ್ಚು ಮೋಟಾರ್‌ಗಳಿದ್ದು, ಏಕಕಾಲಕ್ಕೆ 4-5 ಮೋಟಾರ್‌ಗಳು ಕಾರ್ಯನಿರ್ವಹಿಸಿದಾಗ ಕನಿಷ್ಠ 1,500 ಕ್ಯುಸೆಕ್ ನೀರು ಭಾರಿ ಒತ್ತಡದಲ್ಲಿ ಪೈಪ್‌ಗಳ ಮೂಲಕ ಹರಿಯುತ್ತದೆ. ಈ ವೇಳೆ ಆಗುವ ಸೋರಿಕೆಯನ್ನು ತಕ್ಷಣವೇ ಪತ್ತೆಹಚ್ಚಲು ಅತ್ಯಾಧುನಿಕ 'ಆಲ್ಟ್ರಾಸ್ಕೋಪಿಕ್ ಟೆಸ್ಟ್' ತಂತ್ರಜ್ಞಾನವನ್ನು ಅಳವಡಿಸಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಇದರೊಂದಿಗೆ ತಕ್ಷಣವೇ ನೀರು ನಿಲ್ಲಿಸಿ ದುರಸ್ತಿ ಕೈಗೊಳ್ಳಲು ಇಡೀ 126 ಕಿ.ಮೀ ಪೈಪ್‌ಲೈನ್‌ ಮಾರ್ಗದಲ್ಲಿ 'ಬಟರ್ ಫ್ಲೈ ವಾಲ್ವ್' ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸುಮಾರು 8 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ಆಧುನಿಕ ತಂತ್ರಜ್ಞಾನದಿಂದ ಅಪಾರ ಪ್ರಮಾಣದ ನೀರು ಪೋಲಾಗುವುದು ಹಾಗೂ ಅನಗತ್ಯ ಹಣ, ಶ್ರಮ ವ್ಯರ್ಥವಾಗುವುದು ತಪ್ಪಲಿದೆ ಎಂದು ನಿಗಮದ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ