image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈತರ ಒಪ್ಪಿಗೆಯಿಲ್ಲದೆ ಬಲವಂತದ ಭೂಸ್ವಾಧೀನ ಇಲ್ಲ: ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸ್ಪಷ್ಟನೆ

ರೈತರ ಒಪ್ಪಿಗೆಯಿಲ್ಲದೆ ಬಲವಂತದ ಭೂಸ್ವಾಧೀನ ಇಲ್ಲ: ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸ್ಪಷ್ಟನೆ

ಬೆಂಗಳೂರು : ತೀವ್ರ ರಾಜಕೀಯ ಜಟಾಪಟಿ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಸಾಧಕ-ಬಾಧಕಗಳ ಪರಿಶೀಲನೆ ಹಾಗೂ ರೈತರ ಆತಂಕಗಳನ್ನು ಆಲಿಸಲು ಶೀಘ್ರದಲ್ಲೇ "ವಿಶೇಷ ಉನ್ನತ ಮಟ್ಟದ ಸಮಿತಿ"ಯೊಂದನ್ನು ರಚಿಸುವುದಾಗಿ ಘೋಷಿಸಿದರು. ಯಾವುದೇ ಒಬ್ಬ ರೈತನ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯ ತಮ್ಮ ಸರ್ಕಾರಕ್ಕಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಸರ್ಕಾರ ರಚಿಸಲಿರುವ ಈ ವಿಶೇಷ ಸಮಿತಿಯು ನೇರವಾಗಿ ಗ್ರಾಮಗಳಿಗೆ ಮತ್ತು ರೈತರ ಬಳಿಗೇ ತೆರಳಿ ಅವರ ಅಹವಾಲುಗಳನ್ನು ಆಲಿಸಲಿದೆ. ಈ ಯೋಜನೆ ಜನರಿಗೆ ಬೇಕೋ ಅಥವಾ ಬೇಡವೋ ಎಂಬ ಎಲ್ಲ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಿತಿಯು ವರದಿ ನೀಡಲಿದ್ದು, ಅದರ ಆಧಾರದ ಮೇಲೆ ಮುಂದಿನ ತೀರ್ಮಾನವನ್ನು ಕೈಗೊಂಡು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಸಿಎಂ ತಿಳಿಸಿದರು.

ರೈತರ ಜಮೀನು ಸ್ವಾಧೀನದ ಕುರಿತು ಎದ್ದಿರುವ ಆತಂಕಕ್ಕೆ ಸಂಪೂರ್ಣ ತೆರೆ ಎಳೆದ ಡಿ.ಕೆ. ಶಿವಕುಮಾರ್ ಅವರು, ಜಮೀನು ನೀಡಲು ಇಷ್ಟವಿಲ್ಲದ ರೈತರು ಎಂದಿನಂತೆ ತಮ್ಮ ಭೂಮಿಯಲ್ಲೇ ಕೃಷಿ ಚಟುವಟಿಕೆ ಮುಂದುವರಿಸಲು ಸ್ವತಂತ್ರರಾಗಿದ್ದಾರೆ ಎಂದರು. ಯಾರದ್ದೇ ಒಂದು ಗುಂಟೆ ಜಮೀನನ್ನೂ ಸರ್ಕಾರ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ. ರೈತರು ತಾವಾಗಿಯೇ ಮುಂದೆ ಬಂದು ಸ್ವಇಚ್ಛೆಯಿಂದ ಭೂಮಿ ಕೊಟ್ಟರೆ ಮಾತ್ರ ಸೂಕ್ತ ಪರಿಹಾರ ನೀಡಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ, ಭೂಮಿ ನೀಡಲು ಒಪ್ಪದ ರೈತರ ಜಮೀನಿನ ಯಥಾಸ್ಥಿತಿಯನ್ನು (ಲ್ಯಾಂಡ್ ಸ್ಟೇಟಸ್) ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಭರವಸೆ ನೀಡಿದರು. ಆದರೆ, ಈ ಹಿಂದೆ ಹೊರಡಿಸಲಾಗಿರುವ ರೆಡ್ ಝೋನ್ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಡದಿಯಲ್ಲಿ ಜಮೀನು ಸರ್ವೇ ವೇಳೆ ನಡೆದ ಗಲಾಟೆ ಮತ್ತು ಅಧಿಕಾರಿಗಳ ಮೇಲಿನ ಹಲ್ಲೆಯ ಘಟನೆಯಿಂದ ತಮಗೆ ತೀವ್ರ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜಕೀಯ ಪ್ರೇರಣೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಕೆಲವರು ಅಮಾಯಕ ರೈತರನ್ನು ತಪ್ಪು ದಾರಿಗೆ ಎಳೆಯುವ ವ್ಯವಸ್ಥಿತ ಸಂಚು ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ತಾವು ಕೂಡ ಒಬ್ಬ ಸಾಮಾನ್ಯ ರೈತನ ಮಗನಾಗಿದ್ದು, ಭೂಮಿ ಮತ್ತು ರೈತರ ಶ್ರಮದ ಬಗ್ಗೆ ಅಪಾರ ಗೌರವವಿದೆ ಎಂದ ಸಿಎಂ, ಈ ಯೋಜನೆ ತಾವೇನೂ ಸ್ವತಃ ರೂಪಿಸಿದ ತಮ್ಮ ಕನಸಿನ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು. ಕೇವಲ ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವಷ್ಟೇ ಎಂದು ಹೇಳಿದ ಅವರು, ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅಧಿಕೃತ ದಾಖಲೆಗಳ ಸಮೇತ ತಿರುಗೇಟು ನೀಡಿದರು. ಸೆಪ್ಟೆಂಬರ್ 23, 2006 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಬೆಂಗಳೂರಿನ ಸುತ್ತಮುತ್ತ ನಂದಗುಡಿ, ಕಸಬಾ ಬಿಡದಿ, ಸಾತನೂರು ಮತ್ತು ಸೋಲೂರು ಸೇರಿದಂತೆ 5 ಸಮಗ್ರ ಟೌನ್‌ಶಿಪ್‌ಗಳನ್ನು ಬಿಎಂಆರ್‌ಡಿಎ ಮೂಲಕ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿತ್ತು ಎಂದು ನೆನಪಿಸಿದರು. ಬಳಿಕ 2006ರ ನವೆಂಬರ್ 20 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ ಈ ಪ್ರದೇಶವನ್ನು 'ರೆಡ್ ಝೋನ್' ಎಂದು ಘೋಷಿಸಲಾಗಿತ್ತು. ಅಷ್ಟೇ ಅಲ್ಲದೆ, 2007ರಲ್ಲಿ ಗಲಾಟೆ ನಡೆದ ಮಾರಡಹಳ್ಳಿ ಮತ್ತು ವಡೆಯರಹಳ್ಳಿ ಗ್ರಾಮಗಳನ್ನು ಈ ಯೋಜನೆಗೆ ಸೇರಿಸಿದಾಗಲೂ ಮುಖ್ಯಮಂತ್ರಿಯಾಗಿದ್ದವರು ಇದೇ ಕುಮಾರಸ್ವಾಮಿ ಎಂದು ಗುಡುಗಿದರು.

ಖಾಸಗಿ ಡೆವಲಪರ್ ಡಿಎಲ್‌ಎಫ್ ಸಂಸ್ಥೆಯಿಂದ 400 ಕೋಟಿ ರೂ. ಭದ್ರತಾ ಠೇವಣಿ ಪಡೆದು ಯೋಜನೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದೂ ಹಿಂದಿನ ಸರ್ಕಾರದ ಅವಧಿಯಲ್ಲೇ ಎಂದ ಸಿಎಂ, "ಈಗ ಹೇಳಿ ಕುಮಾರಣ್ಣ, ರಿಯಲ್ ಎಸ್ಟೇಟ್ ವ್ಯವಹಾರವನ್ನು ಉತ್ತೇಜಿಸಿದವರು ನೀವೋ ಅಥವಾ ನಾನೋ?" ಎಂದು ಪ್ರಶ್ನಿಸಿದರು. ತರುವಾಯ 2010ರಲ್ಲಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರವೂ ಇದೇ ಯೋಜನೆಗೆ ಜಾಗತಿಕ ಟೆಂಡರ್ ಕರೆದಿತ್ತು. ಹೀಗಾಗಿ ಇದು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಅವಧಿಯಲ್ಲಿ ಆರಂಭವಾದ ಯೋಜನೆಯಾಗಿದ್ದು, ನಮ್ಮ ಸರ್ಕಾರ ರೈತರ ಬದುಕನ್ನು ಕಸಿದುಕೊಳ್ಳುತ್ತಿಲ್ಲ ಎಂದು ಪ್ರತಿಪಾದಿಸಿದರು. ಇದೇ ವೇಳೆ ತಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಕುಮಾರಸ್ವಾಮಿಯವರು ಹೇಳುತ್ತಿರುವುದಕ್ಕೆ ಲೇವಡಿ ಮಾಡಿದ ಸಿಎಂ, ಅವರ ಆಸೆ ಈಡೇರಲಿ, ಜೈಲಿಗೆ ಹೋಗುವುದು ತಮಗೇನೂ ಹೊಸತಲ್ಲ ಎಂದರು. ತಾವು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ, ಅದಕ್ಕೇ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Category
ಕರಾವಳಿ ತರಂಗಿಣಿ