image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಿಯಮಬಾಹಿರವಾಗಿ ಹೆಚ್ಚುವರಿ ಬಡ್ಡಿ ವಸೂಲಿ: ಎಸ್​​ಬಿಐ ಬ್ಯಾಂಕ್​ಗೆ ಗ್ರಾಹಕರ ನ್ಯಾಯಾಲಯ ದಂಡ!

ನಿಯಮಬಾಹಿರವಾಗಿ ಹೆಚ್ಚುವರಿ ಬಡ್ಡಿ ವಸೂಲಿ: ಎಸ್​​ಬಿಐ ಬ್ಯಾಂಕ್​ಗೆ ಗ್ರಾಹಕರ ನ್ಯಾಯಾಲಯ ದಂಡ!

ಶಿವಮೊಗ್ಗ : ಕೇಂದ್ರ ಸರ್ಕಾರದ ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಪಡೆದ ವಿದ್ಯಾರ್ಥಿಯೊಬ್ಬರಿಗೆ ಅನಾವಶ್ಯಕವಾಗಿ ಹೆಚ್ಚುವರಿ ಬಡ್ಡಿ ವಿಧಿಸಿ ಕಿರುಕುಳ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​​ಬಿಐ) ಬ್ಯಾಂಕ್‌ಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗವು ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಾಗರ ತಾಲೂಕಿನ ಶಂಕರಪ್ರಸಾದ್ ಕೆ.ಎಸ್. ಎಂಬುವರು 2013 ರಲ್ಲಿ ಎಸ್​​ಬಿಐ ಹೊಸನಗರ ಶಾಖೆಯಲ್ಲಿ 'ಕೇಂದ್ರ ವಲಯ ಬಡ್ಡಿ ರಿಯಾಯಿತಿ ಯೋಜನೆ-2009' ರ ಅಡಿಯಲ್ಲಿ 4 ವರ್ಷದ ಪದವಿ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆದಿದ್ದರು. ನಿಯಮದ ಪ್ರಕಾರ ಸಾಲದ ಅವಧಿ ಮುಗಿಯುವವರೆಗೆ (30/05/2018) ಬರುವ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿತ್ತು. ಆದರೆ, ಬ್ಯಾಂಕ್‌ನವರು ನಿಯಮಬಾಹಿರವಾಗಿ ಗ್ರಾಹಕರಿಂದ 41,199/- ರೂ.ಗಳಷ್ಟು ಹೆಚ್ಚುವರಿ ಬಡ್ಡಿಯನ್ನು ವಸೂಲಿ ಮಾಡಿದ್ದರು.

ಈ ಕುರಿತು ಗ್ರಾಹಕರು ಹಲವು ಬಾರಿ ಬ್ಯಾಂಕ್‌ಗೆ ಖುದ್ದಾಗಿ ಭೇಟಿ ನೀಡಿ ಹಾಗೂ ಇ-ಮೇಲ್ ಮೂಲಕ ಮನವಿ ಮಾಡಿದರೂ ಬ್ಯಾಂಕ್ ಯಾವುದೇ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ನೊಂದ ಗ್ರಾಹಕರು ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಉಭಯ ಪಕ್ಷಕಾರರ ವಾದ-ವಿವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್ ಸೇವಾ ನ್ಯೂನತೆ ಎಸಗಿರುವುದು ಸ್ಪಷ್ಟವಾಗಿದೆ ಎಂದು ತೀರ್ಪು ನೀಡಿದೆ.

ಗ್ರಾಹಕರ ದೂರನ್ನು ಭಾಗಶಃ ಪುರಸ್ಕರಿಸಿರುವ ಆಯೋಗವು, ಬ್ಯಾಂಕ್ ಗ್ರಾಹಕರಿಂದ ಕಾನೂನುಬಾಹಿರವಾಗಿ ವಸೂಲಿ ಮಾಡಿದ ರೂ. 41,199/- ಗಳನ್ನು ದಿನಾಂಕ: 31/07/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 7ರ ಬಡ್ಡಿಯೊಂದಿಗೆ ಆದೇಶ ಬಂದ 45 ದಿನಗಳ ಒಳಗೆ ಪಾವತಿಸಬೇಕು ಎಂದು ಸೂಚಿಸಿದೆ. ತಪ್ಪಿದಲ್ಲಿ ಪೂರ್ತಿ ಮೊತ್ತ ಪಾವತಿ ಆಗುವವರೆಗೆ ಶೇ. 10 ರಷ್ಟು ಬಡ್ಡಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇದರೊಂದಿಗೆ ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಹಿಂಸೆಗಾಗಿ ರೂ. 25,000/- ಪರಿಹಾರ ಹಾಗೂ ಪ್ರಕರಣದ ಕಾನೂನು ಹೋರಾಟದ ವೆಚ್ಚವಾಗಿ ರೂ. 10,000/- ಗಳನ್ನು ನೀಡುವಂತೆ ಬ್ಯಾಂಕ್‌ಗೆ ಆದೇಶಿಸಿದೆ. ಒಂದು ವೇಳೆ ಈ ಪರಿಹಾರದ ಮೊತ್ತವನ್ನು 45 ದಿನಗಳ ಒಳಗಾಗಿ ಪಾವತಿಸದಿದ್ದರೆ, ಅದಕ್ಕೂ ವಾರ್ಷಿಕ ಶೇ. 10 ರಷ್ಟು ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ ಎಂದು ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Category
ಕರಾವಳಿ ತರಂಗಿಣಿ