ಉಡುಪಿ : ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ (ಟನಲ್) ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕೈಗೊಳ್ಳುವ ಕುರಿತು ಇದುವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಆಗುಂಬೆ ಘಾಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗುಂಬೆ ಘಾಟಿಯಲ್ಲಿ ಡಬಲ್ ರಸ್ತೆ ನಿರ್ಮಾಣ ಮಾಡಲು ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿ ಸೇರಿದಂತೆ ಹಲವು ಪರಿಸರ ಹಾಗೂ ತಾಂತ್ರಿಕ ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಆಗುಂಬೆ ಘಾಟಿ ರಸ್ತೆ ಅಗಲೀಕರಣದ ಸಾಧ್ಯತೆಗಳನ್ನು ಖುದ್ದಾಗಿ ಪರಿಶೀಲಿಸುವ ಉದ್ದೇಶದಿಂದಲೇ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ ಸಚಿವರು, ಮೊದಲ ಹಂತದಲ್ಲಿ ಹೆಬ್ರಿ ಮತ್ತು ಕಾರ್ಕಳ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು, ತದನಂತರ ಬೆಂಗಳೂರಿನಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಆಗುಂಬೆ ಟನಲ್ ಯೋಜನೆಗೆ ಟೆಂಡರ್ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಟೆಂಡರ್ ಕರೆಯಲಾಗಿದ್ದರೂ ಇದುವರೆಗೆ ಯಾರೂ ಅರ್ಜಿ ಸಲ್ಲಿಸಿಲ್ಲ. ಅಲ್ಲದೆ, ಸವಿಸ್ತಾರ ಯೋಜನಾ ವರದಿ (DPR) ಸೇರಿದಂತೆ ಹಲವು ತಾಂತ್ರಿಕ ವಿಷಯಗಳಲ್ಲಿಯೂ ಇನ್ನೂ ಸ್ಪಷ್ಟತೆ ಇಲ್ಲ ಎಂದು ಹೇಳಿದರು. ಇದೇ ವೇಳೆ ಇತರ ಘಾಟ್‌ಗಳ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ಸಚಿವರು, ಸಕಲೇಶಪುರ ಘಾಟಿಯ ಸಮಸ್ಯೆಯನ್ನು ಈಗಾಗಲೇ ಮೂರು ವರ್ಷಗಳಲ್ಲಿ ಪರಿಹರಿಸಲಾಗಿದೆ ಹಾಗೂ ಚಾರ್ಮಾಡಿ ಘಾಟಿ ದುರಸ್ತಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.