ಬೆಂಗಳೂರು: ಇಲ್ಲಿನ ಆನೇಕಲ್‌ನಲ್ಲಿರುವ ಅಲಯೆನ್ಸ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜುಲೈ 11 ರಂದು 'ತುಳುವೆರೆ ಜಾಲಾಟೊರ್ದು ಯಕ್ಷಗಾನ ಮುಟ್ಟ' ಎಂಬ ವಿಶೇಷ ತುಳು ಯಕ್ಷಗಾನ ಕಾರ್ಯಾಗಾರ, ವಿಚಾರಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಂಗಳೂರಿನ ತುಳು ವರ್ಲ್ಡ್ ಫೌಂಡೇಶನ್ ಮತ್ತು ಬೆಂಗಳೂರು ತುಳುವರೆ ಚಾವಡಿ ತೆನ್ಕಾಯಿ ಸಂಘಟನೆಗಳು, ಅಲಯನ್ಸ್ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ| ಕೆ. ಚಿನ್ನಪ್ಪಗೌಡ ಅವರು ದಿಕ್ಸೂಚಿ ಭಾಷಣ ಮಾಡಿದರು. ಅಲಯೆನ್ಸ್ ವಿವಿಯ ಡೀನ್ ಡಾ| ಲಿಜು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಡಾ| ಎ.ಎಂ.ಶ್ರೀಧರನ್ ಸ್ವಾಗತಿಸಿದರೆ, ಡಾ| ರಾಜೇಶ್ ಕೃಷ್ಣ ಆಳ್ವ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾನುಮತಿ ಶೆಟ್ಟಿ, ಡಾ| ಶ್ರುತಿ ಚಂದ್ರಶೇಖರ್ ಹಾಗೂ ವಿನೋದ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಶೆಟ್ಟಿ ವಂದನಾರ್ಪಣೆ ಮಾಡಿದರು.
ವಿಚಾರಗೋಷ್ಠಿಯಲ್ಲಿ 'ತುಳು ಯಕ್ಷಗಾನ: ಪ್ರಸಂಗ ಮತ್ತು ಪ್ರಯೋಗ' ವಿಷಯದ ಕುರಿತು ಸಾಹಿತಿ ಹಾಗೂ ಸಂಶೋಧಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ವಿಶೇಷ ಉಪನ್ಯಾಸ ನೀಡಿದರು. ಜಾಲಾಟದಿಂದ ಬಯಲಾಟದವರೆಗೆ ತುಳು ರಂಗಭೂಮಿ ವಿಕಾಸಗೊಂಡಿದ್ದು, ಯಕ್ಷಗಾನ ಅದರ ವಿಸ್ತೃತ ರೂಪವಾಗಿದೆ ಎಂದ ಅವರು, ಯಕ್ಷಗಾನದ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಮತ್ತೊಬ್ಬ ಪ್ರಸಂಗಕರ್ತ ಡಾ| ತಾರಾನಾಥ ವರ್ಕಾಡಿ ಮಾತನಾಡಿ, ಉತ್ಕೃಷ್ಟ ಕಾವ್ಯ ಗುಣಗಳುಳ್ಳ ಛಂದೋಬದ್ಧ ಪ್ರಸಂಗಗಳನ್ನು ತುಳು ಭಾಷೆಯಲ್ಲೂ ರಚಿಸಬಹುದೆಂಬುದನ್ನು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ ಎಂದರು. ಜಾಲಾಟವು ಭೂತಾರಾಧನೆ ಮತ್ತು ಯಕ್ಷಗಾನದಂತಹ ಕಲೆಗಳಿಗೆ ಪ್ರೇರಣೆಯಾಗಿದೆ ಎಂದು ಜಾನಪದ ವಿದ್ವಾಂಸ ದಾ.ನ. ಉಮ್ಮಣ್ಣ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವಿಶಿಷ್ಟ 'ಗಾನ - ನಾಟ್ಯ' ಪ್ರಾತ್ಯಕ್ಷಿಕೆ ನಡೆಯಿತು. ಪ್ರಶಾಂತ ರೈ ಪಂಜ ಅವರ ಭಾಗವತಿಕೆಯಲ್ಲಿ, ವರುಣ್ ಹೆಬ್ಬಾರ್ ಮತ್ತು ರಂಜಿತ್ ಅವರ ಹಿಮ್ಮೇಳಕ್ಕೆ ಭುವನ್ ಶೆಟ್ಟಿ ಬೋಳಾರ ನೃತ್ಯ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಸಮಾರೋಪದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ 'ಸಿರಿ ಕಿಷ್ಣೆ ಚಂದಪಾಲಿ' ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿತು. ಇದರಲ್ಲಿ ಡಾ| ತಾರಾನಾಥ ವರ್ಕಾಡಿ, ಸುಂದರ ಬಂಗಾಡಿ ಸೇರಿದಂತೆ ಹಲವು ಹಿರಿಯ ಕಲಾವಿದರು ಪಾತ್ರ ನಿರ್ವಹಿಸಿದ್ದರು. ದಿನವಿಡೀ ನಡೆದ ಈ ಸಾಂಸ್ಕೃತಿಕ ಸಮ್ಮಿಲನದಲ್ಲಿ ನೂರಾರು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಕಲಾಭಿಮಾನಿಗಳು ಪಾಲ್ಗೊಂಡಿದ್ದರು.