ಚಿಕ್ಕಮಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕಳೆದ ಮೂರು ತಿಂಗಳಿಂದ ಸ್ಥಳೀಯ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಅವರ ಧ್ವನಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ರವಿ ಸಿ.ಟಿ. ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿಗೂ ಶೇಕಡಾ 80 ರಷ್ಟು ರೈತರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಹಠಮಾರಿ ಧೋರಣೆ ಬಿಟ್ಟು ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯಕ್ಕೆ ಬೆಲೆ ನೀಡಬೇಕು ಮತ್ತು ರೈತರ ಭಾವನೆಗೆ ಗೌರವ ನೀಡಿ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ರಾಜ್ಯದ ಗೃಹ ಸಚಿವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ ರವಿ ಅವರು, ಅವರಿಗೆ ಆಡಳಿತಕ್ಕಿಂತ ‘ಟ್ವೀಟ್’ ಮಾಡುವುದೇ ಹೆಚ್ಚು ಮುಖ್ಯವಾಗಿದೆ ಎಂದು ವ್ಯಂಗ್ಯವಾಡಿದರು. ಪ್ರಜಾಸೇವಾ ಇಲಾಖೆ ನಡೆಸುವ ಬದಲು ಸರ್ಕಾರ 'ಟ್ವೀಟ್ ಇಲಾಖೆ'ಯನ್ನೇ ಆರಂಭಿಸಿ ಅದರ ಜವಾಬ್ದಾರಿಯನ್ನು ಗೃಹ ಸಚಿವರಿಗೆ ವಹಿಸಲಿ ಎಂದು ಅವರು ಲೇವಡಿ ಮಾಡಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯವಾಗಿದ್ದು ಇದರಲ್ಲಿ ಬಿಜೆಪಿ ತಲೆಹಾಕುವುದಿಲ್ಲ ಎಂದರು. ಆದರೆ ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇರುವುದರಿಂದ, ಜನಜೀವನಕ್ಕೆ ನೇರವಾಗಿ ಸಂಬಂಧಿಸಿರುವ ಕೃಷಿ ಮತ್ತು ಶಿಕ್ಷಣ ಇಲಾಖೆಗಳಿಗೆ ತಕ್ಷಣವೇ ಪೂರ್ಣ ಪ್ರಮಾಣದ ಜವಾಬ್ದಾರಿಯುತ ಸಚಿವರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಎಲ್ಲ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ, ಆದರೂ ಕನಿಷ್ಠ ರೈತರ ಮತ್ತು ಶಿಕ್ಷಣ ಇಲಾಖೆಯ ಹಿತದೃಷ್ಟಿಯಿಂದ ಶೀಘ್ರವಾಗಿ ಸಚಿವರನ್ನು ನೇಮಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.