image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪುತ್ರಿಗೆ ಸರಕಾರಿ ಹುದ್ದೆ ನೀಡಲು ಮೀಸಲಾತಿ ದುರುಪಯೋಗ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು

ಪುತ್ರಿಗೆ ಸರಕಾರಿ ಹುದ್ದೆ ನೀಡಲು ಮೀಸಲಾತಿ ದುರುಪಯೋಗ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌‍ಸಿ) ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷರೊಬ್ಬರು ಭ್ರಷ್ಟಾಚಾರ ಮತ್ತು ಅಕ್ರಮದ ಆರೋಪದ ಮೇಲೆ ಅಮಾನತುಗೊಂಡಿರುವ ಮಹತ್ವದ ಘಟನೆ ನಡೆದಿದೆ. ತಮ್ಮ ಪುತ್ರಿಗೆ ನಿಯಮಬಾಹಿರವಾಗಿ ಸರಕಾರಿ ಹುದ್ದೆ ನೀಡಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ, ಕೆಪಿಎಸ್‌‍ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಆದೇಶ ಹೊರಡಿಸಿದ್ದಾರೆ.

ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದ ಹಿನ್ನೆಲೆಯಲ್ಲಿ ಈ ಹಠಾತ್‌ ಕ್ರಮ ಕೈಗೊಳ್ಳಲಾಗಿದೆ. ಸಂವಿಧಾನದ ವಿಧಿ 317ರಡಿ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ಹುದ್ದೆಯಿಂದ ತೆಗೆದುಹಾಕುವ ಅಂತಿಮ ಅಧಿಕಾರ ರಾಷ್ಟ್ರಪತಿಗಿರುತ್ತದೆಯಾದರೂ, ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಅವರನ್ನು ಅಮಾನತುಗೊಳಿಸುವ ವಿಶೇಷ ಅಧಿಕಾರವನ್ನು ರಾಜ್ಯಪಾಲರು ಚಲಾಯಿಸಿದ್ದಾರೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಸುಪ್ರೀಂಕೋರ್ಟ್‌ಗೆ ಉಲ್ಲೇಖಿಸುವಂತೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.

ಕೆಪಿಎಸ್‌‍ಸಿ ಅಧ್ಯಕ್ಷರು ತಮ್ಮ ಇಬ್ಬರು ಪುತ್ರಿಯರನ್ನು ನಿಯಮಬಾಹಿರವಾಗಿ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ದೂರುಗಳು ದಾಖಲಾಗಿದ್ದವು. ಆಯೋಗದ ನಿಯಮಾವಳಿಗಳ ಪ್ರಕಾರ, ತಮ್ಮ ನೇರ ಅವಲಂಬಿತರು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷರು ಆ ಪ್ರಕ್ರಿಯೆಯಿಂದ ದೂರವಿರಬೇಕಾಗಿತ್ತು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಬೇಕಾಗಿತ್ತು. ಆದರೆ ಅವರು ಇದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಮುಖ್ಯವಾಗಿ, ಅಧ್ಯಕ್ಷರ ಪುತ್ರಿ ಸುಮಾ ಎಸ್‌‍. ಸಾಹುಕಾರ್‌ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ 3ಬಿ ಮೀಸಲಾತಿಯಡಿ ಅರ್ಜಿ ಸಲ್ಲಿಸುವಾಗ, ತಮ್ಮ ಕುಟುಂಬದ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಸುಳ್ಳು ಘೋಷಣೆ ನೀಡಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿರುವುದು ದಾಖಲೆಗಳ ಪರಿಶೀಲನೆ ವೇಳೆ ಬಯಲಾಗಿದೆ. ತಂದೆ ಕೆಪಿಎಸ್‌‍ಸಿ ಅಧ್ಯಕ್ಷರಾಗಿ ತಿಂಗಳಿಗೆ 2.25 ಲಕ್ಷ ರೂ. ವೇತನ ಪಡೆಯುತ್ತಿದ್ದರೂ, ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು ಮರೆಮಾಚಿ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಮತ್ತು ಕ್ರೀಮಿ ಲೇಯರ್‌ ವಿನಾಯಿತಿಯ ಲಾಭವನ್ನು ಅಕ್ರಮವಾಗಿ ಪಡೆಯಲು ಯತ್ನಿಸಲಾಗಿದೆ. 2002ರ ಸರ್ಕಾರಿ ಆದೇಶದ ಪ್ರಕಾರ ಕೆಪಿಎಸ್‌‍ಸಿ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ನಿಯಮವನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

ಈಗಾಗಲೇ ಸುಮಾ ಹಾಗೂ ನಕಲಿ ದಾಖಲೆ ನೀಡಿದ ಅಧಿಕಾರಿಗಳ ವಿರುದ್ಧ ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಲಾಗಿದೆ. ಆಯೋಗದ ದೈನಂದಿನ ಕಾರ್ಯಕಲಾಪಗಳಿಗೆ ತೊಂದರೆಯಾಗದಂತೆ, ಮುಂದಿನ ಆದೇಶದವರೆಗೆ ಕೆಪಿಎಸ್‌‍ಸಿಯ ಹಿರಿಯ ಸದಸ್ಯರೊಬ್ಬರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಕಾರ್ಯ ನಿರ್ವಹಿಸಲು ರಾಜ್ಯಪಾಲರು ಆದೇಶಿಸಿದ್ದಾರೆ.

Category
ಕರಾವಳಿ ತರಂಗಿಣಿ