ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಬಿದ್ದಿರುವ ಹಳ್ಳಿಗಳ ಸರ್ವೆ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳಿಗೆ ರೈತರು ಮತ್ತು ರೈತ ಮಹಿಳೆಯರು ಉಗ್ರ ಪ್ರತಿಭಟನೆಯ ಬಿಸಿ ಮುಟ್ಟಿಸಿದ ಘಟನೆ ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ನಡೆದಿದೆ. ಜಂಟಿ ಅಳತೆ ಸಮಿತಿಯ (JMC) ಸರ್ವೆ ನಡೆಸಲು ಭಾರಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆಗಮಿಸಿದ್ದ ಅಧಿಕಾರಿಗಳ ಕಾರುಗಳನ್ನು ರೈತ ಮಹಿಳೆಯರು ಸುತ್ತುವರಿದು, ಪೊರಕೆಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉದ್ರಿಕ್ತಗೊಂಡ ಕೆಲವರು ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾರುಗಳ ಗಾಜುಗಳು ಪುಡಿಯಾಗಿವೆ. ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ರೈತರನ್ನು ನಿಯಂತ್ರಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಹರಕತ್ತಿನ ನಡುವೆಯೂ ರೈತರು ಅಧಿಕಾರಿಗಳ ವಾಹನಗಳಿಗೆ ಮುತ್ತಿಗೆ ಹಾಕಿ ಜಂಟಿ ಸರ್ವೆ ಕಾರ್ಯವನ್ನು ಸಂಪೂರ್ಣವಾಗಿ ತಡೆದಿದ್ದಾರೆ.
ಇತ್ತೀಚೆಗಷ್ಟೇ ರೈತ ಮುಖಂಡರ ಸಭೆ ನಡೆಸಿದ್ದ ಸ್ಥಳೀಯ ಶಾಸಕರು, ಆದಷ್ಟು ಬೇಗ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮುಂದಿನ ಕ್ರಮಗಳನ್ನು ಸಮಾಲೋಚನೆ ಮೂಲಕ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನು ಬದಿಗಿಟ್ಟು ರಾಜ್ಯ ಸರ್ಕಾರ ಹಾಗೂ ರಾಮನಗರ ಜಿಲ್ಲಾಡಳಿತವು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಲವಂತದ ಭೂಸ್ವಾಧೀನ ಮುಂದುವರಿಸಲು ಬೃಹತ್ ಪೊಲೀಸ್ ಸರ್ಪಗಾವಲಿನಲ್ಲಿ ಸರ್ವೆ ಸಿಬ್ಬಂದಿಯನ್ನು ಕಳುಹಿಸಿರುವುದು ರೈತ ಸಮುದಾಯಕ್ಕೆ ಮಾಡಿದ ಘೋರ ವಿಶ್ವಾಸದ್ರೋಹ ಎಂದು ಕೃಷಿಕರು ಆಕ್ರೋಶ ಹೊರಹಾಕಿದ್ದಾರೆ. ಇದು ಸರ್ಕಾರಿ ಯಂತ್ರದ ಸ್ಪಷ್ಟ ದುರುಪಯೋಗ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ. ಈ ಘಟನೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ. ಅವರು, "ಸರ್ಕಾರ ಈಗಲಾದರೂ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ರೈತರ ಬಳಿ ಬಂದು ಮುಕ್ತ ಸಮಾಲೋಚನೆ ನಡೆಸಬೇಕು. ಒಂದು ವೇಳೆ ಬಲವಂತದ ಭೂಸ್ವಾಧೀನ ನಿಲ್ಲಿಸದಿದ್ದರೆ, ರಾಜ್ಯದ ಪ್ರತಿಯೊಬ್ಬ ರೈತರೂ ಬಿಡದಿ ಭಾಗದ ರೈತರ ಪರವಾಗಿ ರಸ್ತೆಗಿಳಿದು ಹೋರಾಡಲಿದ್ದಾರೆ" ಎಂದು ಕಟು ಎಚ್ಚರಿಕೆ ನೀಡಿದ್ದಾರೆ.