ಬೆಂಗಳೂರು : ಕರ್ನಾಟಕದಲ್ಲಿ ಭಾರಿ ಕೋಲಾಹಲ ಮೂಡಿಸಿದ ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಧರ್ಮಸ್ಥಳ ಹಾಗೂ ಸ್ಥಳೀಯ ದೇವಸ್ಥಾನದ ಪ್ರಮುಖರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸಿದ್ದ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸಂಪೂರ್ಣವಾಗಿ ವಜಾಗೊಳಿಸಿದೆ.
ಅಪರಾಧ ಹಿನ್ನೆಲೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ ಪುತ್ತೂರು ಉಪ ವಿಭಾಗಾಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಲು ಆದೇಶಿಸಿದ್ದರು. ಈ ಆದೇಶವನ್ನು ಈ ಹಿಂದೆ ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ತಿಮರೋಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಲಭ್ಯವಿರುವ ಶಾಸನಬದ್ಧ ಕಾನೂನು ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಪೀಠವು ಗಂಭೀರವಾಗಿ ಪ್ರಶ್ನಿಸಿದೆ. ಸೂಕ್ತ ಸಕ್ಷಮ ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ಅರ್ಜಿದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು, ತಮ್ಮ ಗಡೀಪಾರು ಪ್ರಕರಣವನ್ನು ಸೌಜನ್ಯ ಪ್ರಕರಣದೊಂದಿಗೆ ಜೋಡಿಸಿ ವಿಚಿತ್ರ ವಾದ ಮಂಡಿಸಿದ್ದರು. ಸ್ಥಳೀಯ ದೇವಸ್ಥಾನದ ಪ್ರಮುಖರು ತಮ್ಮನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಾದ ಆಲಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಸಂಜಯ್ ಕುಮಾರ್ ಹಾಗೂ ಶ್ರೀ ಸಂಜೀವ್ ಸಚ್‌ದೇವ ಅವರನ್ನೊಳಗೊಂಡ ವಿಭಾಗೀಯ ಪೀಠವು, "ನ್ಯಾಯಾಲಯದಲ್ಲಿ ಜೂಜಾಟ ಬೇಡ, ಇಲ್ಲಿ ಅದಕ್ಕೆ ಅವಕಾಶಗಳಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದೆ. ಅಸಂಬಂಧಿತ ವಿಷಯಗಳನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವುದು ಸರಿಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ನ್ಯಾಯಾಲಯವು ತಿಮರೋಡಿಯ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.