image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಪ್ರಮುಖ ಘೋಷಣೆ: ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭ

ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಪ್ರಮುಖ ಘೋಷಣೆ: ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭ

ಬೆಂಗಳೂರು : ರಾಜ್ಯ ಸರ್ಕಾರದ ಬಹುನಿರೀಕ್ಷಿತ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 6ರಿಂದ ಅಧಿವೇಶನ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ 'ಕೃಷ್ಣಾ' ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ 6ರಿಂದ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದರು. ಇದೇ ವೇಳೆ ತಮ್ಮ ದೆಹಲಿ ಪ್ರವಾಸದ ಬಗ್ಗೆಯೂ ಮಾಹಿತಿ ನೀಡಿದ ಸಿಎಂ, ತಾವು ಶೀಘ್ರದಲ್ಲೇ ಒಂದು ದಿನದ ಕೆಲಸದ ನಿಮಿತ್ತ ದೆಹಲಿಗೆ ಭೇಟಿ ನೀಡುವುದಾಗಿ ಮತ್ತು ಮುಂಬರುವ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರು ದಿನಾಂಕ ನಿಗದಿಪಡಿಸಿದ ನಂತರ ಮತ್ತೊಮ್ಮೆ ದೆಹಲಿಗೆ ಪ್ರವಾಸ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ ಹಾಗೂ ಮಾಜಿ ಸಂಸದ ಹೆಚ್. ಹನುಮಂತಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದರು. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ, ರೈಲ್ವೇ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹನುಮಂತಪ್ಪ ಅವರು ಕಳೆದ 45 ವರ್ಷಗಳಿಂದ ತಮಗೆ ಅತ್ಯಂತ ಆಪ್ತರಾಗಿದ್ದರು ಎಂದು ಸ್ಮರಿಸಿದರು. ತಾವು, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಮುನಿಯಪ್ಪ ಅವರು ಹಿರಿಯ ನಾಯಕನಿಗೆ ಅಂತಿಮ ನಮನ ಸಲ್ಲಿಸಿರುವುದಾಗಿ ಹೇಳಿದ ಸಿಎಂ, ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದ ಇಂತಹ ನಾಯಕರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಇನ್ನು ಮಂಡ್ಯ ಜಿಲ್ಲೆಯ ಶಾಸಕರು ಕಾವೇರಿ ನೀರು ಬಿಡುಗಡೆ ಮಾಡುವಂತೆ ಮಾಡಿರುವ ಮನವಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮಂಡ್ಯ ಮತ್ತು ಶ್ರೀರಂಗಪಟ್ಟಣದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಸಚಿವರು ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ತಿಳಿಸಿದರು. ಈ ಕುರಿತು ಶೀಘ್ರದಲ್ಲೇ ಅಧಿಕೃತ ಸಭೆ ನಡೆಸಿ ಅಂತಿಮ ತೀರ್ಮಾನವನ್ನು ಪ್ರಕಟಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಇದೇ ವೇಳೆ ಕೆಪಿಎಸ್ ಸಿ ಅಧ್ಯಕ್ಷರ ಅಮಾನತು ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ರಾಜ್ಯಪಾಲರು ಈ ಆದೇಶ ಹೊರಡಿಸಿದ್ದು, ಅವರ ನಂತರ ಮಂಡಳಿಯಲ್ಲಿ ಯಾರು ಅತ್ಯಂತ ಹಿರಿಯ ಸದಸ್ಯರಿದ್ದಾರೋ ಅವರಿಗೆ ತಕ್ಷಣವೇ ಜವಾಬ್ದಾರಿ ಹಸ್ತಾಂತರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ