image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪ್ರಿಯಾಂಕ್ ಖರ್ಗೆ ವಿರುದ್ಧ ಕನ್ಹೇರಿ ಶ್ರೀಗಳ ತೀಕ್ಷ್ಣ ವಾಗ್ದಾಳಿ

ಪ್ರಿಯಾಂಕ್ ಖರ್ಗೆ ವಿರುದ್ಧ ಕನ್ಹೇರಿ ಶ್ರೀಗಳ ತೀಕ್ಷ್ಣ ವಾಗ್ದಾಳಿ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೆರವಣಿಗೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ವಿರುದ್ಧ ಮಾತನಾಡುವುದು ಕೆಲವರಿಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಸುಲಭದ ತಂತ್ರವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು, "ಪ್ರಿಯಾಂಕ್ ಖರ್ಗೆ ಅವರು ಬೆಳಗಾದರೆ ಆರೆಸ್ಸೆಸ್ ಹೊರತಾಗಿ ಬೇರೇನೂ ಮಾತನಾಡುತ್ತಿಲ್ಲ. ದೊಡ್ಡವರನ್ನು ನಿಂದಿಸಿದರೆ ಪುಕ್ಸಟ್ಟೆ ಹಾಗೂ ಸುಲಭವಾಗಿ ಪ್ರಚಾರ ಸಿಗುತ್ತದೆ ಎಂಬ ತಂತ್ರ ಅವರಿಗೆ ಗೊತ್ತಾಗಿದೆ. ಇದೊಂದು ರೀತಿ ಮಾನಸಿಕ ಕಾಯಿಲೆಯಾಗಿದ್ದು, ಹೀಗೆಯೇ ಮುಂದುವರಿದರೆ ಅವರು ತಮ್ಮ ಅವನತಿಯನ್ನು ತಾವೇ ಬೇಗ ಕಂಡುಕೊಳ್ಳಲಿದ್ದಾರೆ" ಎಂದು ಎಚ್ಚರಿಸಿದರು.

ಮುಂದುವರಿದು ಮಾತನಾಡಿದ ಅವರು, "ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೇಳುವವರು, ನಾಳೆ ಯಾರದ್ದಾದರೂ ಮನೆಗೆ ಊಟಕ್ಕೆ ಹೋಗಲು ಅಥವಾ ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರವಾಸ ಮಾಡಲು ಕೂಡ ಪರ್ಮಿಷನ್ ಕೇಳಿ ಎನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು ಮತ್ತು ಅನುಭವಸ್ಥರಾಗಿದ್ದರೂ ಮಗನಿಗೆ ಬುದ್ಧಿ ಹೇಳುತ್ತಿಲ್ಲ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ, ಈ ರೀತಿಯ ವರ್ತನೆಗಳಿಂದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ, "ಆರೆಸ್ಸೆಸ್ ಸಭೆ ನಡೆಸುವ ಕಡೆಗಳಲ್ಲೆಲ್ಲ ಅನಾಹುತವಾಗುತ್ತದೆ" ಎಂದಿದ್ದ ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೂ ಶ್ರೀಗಳು ತೀಕ್ಷ್ಣವಾಗಿ ತಿರುಗೇಟು ನೀಡಿದರು. "ಕಾಮಾಲೆ ರೋಗವಿರುವವರಿಗೆ ಜಗತ್ತೆಲ್ಲ ಹಳದಿಯಾಗಿಯೇ ಕಾಣುತ್ತದೆ. ಆರೆಸ್ಸೆಸ್ ದೇಶಭಕ್ತರ ಸಂಘಟನೆಯಾಗಿದ್ದು, ಯಾರು ಯಾವ ಚಷ್ಮಾ ಧರಿಸಿ ನೋಡುತ್ತಾರೋ ಅವರಿಗೆ ಹಾಗೆಯೇ ಕಾಣಿಸುತ್ತದೆ. ಜಗತ್ತಿನಲ್ಲಿ ಹೊಲಸಿನ ಮೇಲೆ ಕೂರುವ ನೊಣಗಳೂ ಇವೆ, ಜೇನುತುಪ್ಪದ ಮೇಲೆ ಕೂರುವ ಜೇನ್ನೊಣಗಳೂ ಇವೆ. ಯಾರು ಎಲ್ಲೆಲ್ಲಿ ಕೂರಬೇಕೋ ಅಲ್ಲಲ್ಲಿ ಕೂರುತ್ತಾರೆ" ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

Category
ಕರಾವಳಿ ತರಂಗಿಣಿ