ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಮೇಲೆ ನಗರವಾಸಿಗಳ ಅವಲಂಬನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪ್ರಯಾಣಿಕರು ಎದುರಿಸುತ್ತಿರುವ ನಿತ್ಯದ ತಾಪತ್ರಯಗಳ ಸತ್ಯದರ್ಶನ ಸ್ವತಃ ಸಾರಿಗೆ ಸಚಿವರಿಗೇ ಆಗಿದೆ. ರಾಜ್ಯದಲ್ಲಿ 'ಶಕ್ತಿ ಯೋಜನೆ' ಜಾರಿಯಾದ ಬಳಿಕ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ ಮತ್ತು ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ಸಂಜೆ ಬಿಎಂಟಿಸಿ ಬಸ್‌ಗಳಲ್ಲಿ ಖುದ್ದು ಪ್ರಯಾಣಿಸುವ ಮೂಲಕ 'ರಿಯಾಲಿಟಿ ಚೆಕ್' ನಡೆಸಿದರು.
ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಸಚಿವರನ್ನು ಗುರುತಿಸಲು ಬಸ್ ಸಿಬ್ಬಂದಿಯಾಗಲಿ ಅಥವಾ ಪ್ರಯಾಣಿಕರಾಗಲಿ ಶಕ್ತರಾಗಲಿಲ್ಲ. ಶನಿವಾರ ಸಂಜೆ 7.30ರ ಸುಮಾರಿಗೆ ಜಯಮಹಲ್‌ನಿಂದ ಆರಂಭಿಸಿ ಟಿವಿ ಟವರ್, ಆರ್.ಟಿ. ನಗರ, ಬಳ್ಳಾರಿ ರಸ್ತೆ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್ ಹಾಗೂ ನಾಗವಾರ ಮಾರ್ಗವಾಗಿ ಗೆದ್ಲಹಳ್ಳಿವರೆಗೆ ಸಚಿವರು ಜನಸಾಮಾನ್ಯರಂತೆ ಸಂಚರಿಸಿ ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಪ್ರಯಾಣಿಕರಿಂದ ಬಸ್ ನಿಲುಗಡೆ ಮತ್ತು ನಿರ್ವಹಣೆ ಕುರಿತು ಮಾಹಿತಿಯನ್ನೂ ಸಂಗ್ರಹಿಸಿದರು.
ಈ ರಿಯಾಲಿಟಿ ಚೆಕ್ ವೇಳೆ ಸಚಿವರಿಗೆ ಆಘಾತಕಾರಿ ಅನುಭವವೊಂದು ಎದುರಾಯಿತು. ಹೆಬ್ಬಾಳ-ನಾಗಶೆಟ್ಟಿಹಳ್ಳಿ ಮಾರ್ಗದ ಬಸ್ ಹತ್ತಿದ ಸಚಿವರು ಟಿಕೆಟ್‌ಗಾಗಿ 100 ರೂಪಾಯಿ ನೋಟು ನೀಡಿದಾಗ, ನಿರ್ವಾಹಕ (ಕಂಡಕ್ಟರ್) ಚಿಲ್ಲರೆ ನೀಡುವಂತೆ ಕೇಳಿದ್ದಾನೆ. ಸಚಿವರ ಬಳಿ ಚಿಲ್ಲರೆ ಇಲ್ಲದಿದ್ದಾಗ, ತನ್ನ ಬಳಿಯೂ ಚಿಲ್ಲರೆ ಇಲ್ಲವೆಂದು ಬ್ಯಾಗ್ ತೋರಿಸಿದ ಕಂಡಕ್ಟರ್, "ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ" ಎಂದು ರೂಢಿಯಂತೆ ಗದರಿದ್ದಾನೆ. ಸಚಿವರು ಯಾವುದೇ ಪ್ರತಿರೋಧ ತೋರದೆ ಸುಮ್ಮನೆ ಬಸ್‌ನಿಂದ ಕೆಳಗಿಳಿದು ವ್ಯವಸ್ಥೆಯ ಕಹಿ ಸತ್ಯವನ್ನು ಮನಗಂಡಿದ್ದಾರೆ.
ಇದೇ ತಪಾಸಣೆ ವೇಳೆ ಜಯಮಹಲ್ ಕಡೆಯಿಂದ ಬಂದ ಬಿಎಂಟಿಸಿ ಬಸ್ (KA 57 F 3372) ಫನ್ ವರ್ಲ್ಡ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈಮಾಡಿದರೂ ನಿಲ್ಲಿಸದೆ ನಿರ್ಲಕ್ಷ್ಯದಿಂದ ಮುನ್ನಡೆದಿದ್ದನ್ನು ಸಚಿವರು ಗಮನಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಆ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಅಮಾನತು ಮಾಡಲು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರಯಾಣಿಕರ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಮೂಲಕ ಸಿಬ್ಬಂದಿಗೆ ರವಾನಿಸಿದ್ದಾರೆ.
ಬಸ್‌ನಿಂದ ಇಳಿದ ಬಳಿಕ ಸಚಿವರು ಆಟೋ ಪ್ರಯಾಣದ ಅನುಭವವನ್ನೂ ಪಡೆದರು. ಆಟೋ ಮೀಟರ್‌ನಲ್ಲಿ 30 ರೂಪಾಯಿ ತೋರಿಸುತ್ತಿದ್ದರೂ, ಚಾಲಕ 35 ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಕಾರಣ ಕೇಳಿದಾಗ "ಮೀಟರ್ ಕೆಟ್ಟಿದೆ, ಸರಿ ಮಾಡಿಸುತ್ತೇನೆ" ಎಂದ ಚಾಲಕನಿಗೆ ಸಚಿವರು 40 ರೂಪಾಯಿ ನೀಡಿ ಅಲ್ಲಿಂದ ಹೊರಟಿದ್ದಾರೆ. ಸದ್ಯ ಸಚಿವರ ಈ ರಿಯಾಲಿಟಿ ಚೆಕ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಸಾರಿಗೆ ಸಿಬ್ಬಂದಿಯ ಸಮಸ್ಯೆಗಳನ್ನೂ ಆಲಿಸಿ, ಪ್ರಯಾಣಿಕ ಸ್ನೇಹಿ ನಿಯಮಗಳನ್ನು ತರಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.