image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜೆಡಿಎಸ್‌-ಬಿಜೆಪಿ ಮೈತ್ರಿಗೆ ಎದುರಾಯ್ತು 'ಆರು ಕ್ಷೇತ್ರಗಳ' ಅಭ್ಯರ್ಥಿ ಆಯ್ಕೆ ಪರೀಕ್ಷೆ

ಜೆಡಿಎಸ್‌-ಬಿಜೆಪಿ ಮೈತ್ರಿಗೆ ಎದುರಾಯ್ತು 'ಆರು ಕ್ಷೇತ್ರಗಳ' ಅಭ್ಯರ್ಥಿ ಆಯ್ಕೆ ಪರೀಕ್ಷೆ

ಬೆಂಗಳೂರು: ಮೈತ್ರಿಕೂಟದಲ್ಲಿ ಈ ಹಿಂದೆ ಉಂಟಾಗಿದ್ದ ಗೊಂದಲಗಳು ಮತ್ತು ಅಡ್ಡಮತದಾನದಂತಹ ಪ್ರಮಾದಗಳು ಮುಂದೆ ಮರುಕಳಿಸದಂತೆ ತಡೆಯಲು ಸಮನ್ವಯ ಸಮಿತಿ ರಚಿಸಿಕೊಂಡಿರುವ ಜೆಡಿಎಸ್‌ ಹಾಗೂ ಬಿಜೆಪಿಗೆ ಈಗ ತಕ್ಷಣವೇ 6 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ದೊಡ್ಡ ಸವಾಲು ಎದುರಾಗಿದೆ. ವಿಧಾನ ಪರಿಷತ್ತಿನ 2 ಪದವೀಧರ ಕ್ಷೇತ್ರ, 2 ಶಿಕ್ಷಕರ ಕ್ಷೇತ್ರ ಹಾಗೂ ಸದ್ಯ ತೆರವಾಗಿರುವ 2 ವಿಧಾನಸಭೆ ಕ್ಷೇತ್ರಗಳಿಗೆ ಮೈತ್ರಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ಎರಡೂ ಪಕ್ಷಗಳು ತಮ್ಮಷ್ಟಕ್ಕೆ ತಾವು ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸಿಕೊಳ್ಳುತ್ತಿದ್ದವು. ಇತ್ತೀಚಿನ ವಿಧಾನ ಪರಿಷತ್‌ ಚುನಾವಣೆಯಲ್ಲೂ ಇದೇ ಧೋರಣೆಯಿಂದಾಗಿ ಮೈತ್ರಿ ನಾಯಕರಲ್ಲಿ ಗೊಂದಲ ಉಂಟಾಗಿ, ಅಡ್ಡಮತದಾನಕ್ಕೂ ಕಾರಣವಾಗಿತ್ತು. ಪ್ರಸ್ತುತ ನವೆಂಬರ್ 11ಕ್ಕೆ ಅವಧಿ ಮುಗಿಯಲಿರುವ ಹಾಲಿ ಸದಸ್ಯರಾದ ಚಿದಾನಂದ ಎಂ.ಗೌಡ, ಎಸ್‌.ವಿ.ಸಂಕನೂರ, ಶಶೀಲ್‌ ಜಿ.ನಮೋಶಿ ಹಾಗೂ ಪುಟ್ಟಣ್ಣ ಅವರ ಕ್ಷೇತ್ರಗಳಿಗೆ ಹೊಸದಾಗಿ ಅಭ್ಯರ್ಥಿಗಳನ್ನು ಆರಿಸಬೇಕಿದೆ. ಬಿಜೆಪಿ ಈಗಾಗಲೇ ಮಾರ್ಚ್ ತಿಂಗಳಿನಲ್ಲೇ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಎಸ್‌.ವಿ.ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಶೀಲ್‌ ಜಿ.ನಮೋಶಿ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಕೆ.ಎಂ.ಸುರೇಶ್‌ ಅವರ ಹೆಸರನ್ನು ಏಕಪಕ್ಷೀಯವಾಗಿ ಘೋಷಿಸಿ, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.

ಬಿಜೆಪಿಯ ಈ ನಡೆ ಜೆಡಿಎಸ್‌ನಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಜೆಡಿಎಸ್‌ ಪ್ರಾಬಲ್ಯವಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಿರುವ ಆಗ್ನೇಯ ಕ್ಷೇತ್ರ ತಮಗೆ ಬೇಕು ಹಾಗೂ ಬೆಂಗಳೂರು ಕ್ಷೇತ್ರ ಬೇಡ ಎನ್ನುವುದು ಜೆಡಿಎಸ್ ವಾದವಾಗಿದೆ. ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರಿಗೆ ಆಗ್ನೇಯ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂದು ಜೆಡಿಎಸ್‌ ಪಟ್ಟು ಹಿಡಿದಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ನಡೆದ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದ್ದು, ಆಗ್ನೇಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಹಿಂಪಡೆಯಲು ವರಿಷ್ಠರು ಒಪ್ಪುವುದು ಕಷ್ಟ ಎಂದು ವಿಜಯೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ. ಆಗ್ನೇಯ ಕ್ಷೇತ್ರದಲ್ಲಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ, ಜೆಡಿಎಸ್‌ ಈಗ ಪರ್ಯಾಯವಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದೆ. ಧಾರವಾಡ ಹಾಗೂ ಹಿರಿಯೂರು ಕ್ಷೇತ್ರಗಳ ಪೈಕಿ ಧಾರವಾಡವನ್ನು ಬಿಜೆಪಿಗೆ ಮತ್ತು ಹಿರಿಯೂರನ್ನು ಜೆಡಿಎಸ್‌ಗೆ ಹಂಚಿಕೆ ಮಾಡುವುದು ಸೂಕ್ತ ಎಂದು ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲೇ ರಚನೆಯಾಗಲಿರುವ ಸಮನ್ವಯ ಸಮಿತಿಯಲ್ಲಿ ಮೊದಲಿಗೆ ಈ ಆರೂ ಕ್ಷೇತ್ರಗಳ ಕುರಿತು ಚರ್ಚಿಸಿ, ನಂತರ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಗೆದ್ದಿದ್ದರಿಂದ ಅಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಡ ಬಿಜೆಪಿ ಒಳಗೂ ಇದೆ. ಈ ಎಲ್ಲಾ ಗೊಂದಲಗಳ ನಡುವೆಯೂ, ಅಭ್ಯರ್ಥಿ ಯಾರೇ ಆದರೂ ಎರಡೂ ಕ್ಷೇತ್ರಗಳಲ್ಲಿ ಮೈತ್ರಿಕೂಟವೇ ಗೆಲ್ಲಬೇಕು ಮತ್ತು ಹಳೆಯ ತಪ್ಪುಗಳು ಮರುಕಳಿಸದಂತೆ ಒಟ್ಟಾಗಿ ಮುನ್ನಡೆಯುತ್ತೇವೆ ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ