ಬೆಳಗಾವಿ : ಸುವರ್ಣಸೌಧದಲ್ಲಿ ಇತ್ತೀಚೆಗೆ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳ ಹೊಣೆಗಾರಿಕೆ, ಆಡಳಿತದ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ. "ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ ಜನಾದೇಶ ಕೇಳುತ್ತೇವೆ. ಆದರೆ ಅಧಿಕಾರಿಗಳು ಪ್ರತಿದಿನ ಜನರ ವಿಶ್ವಾಸಕ್ಕೆ ಉತ್ತರದಾಯಕರಾಗಿರಬೇಕು. ಕರ್ತವ್ಯ ನಿರ್ವಹಿಸದಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಅದು ಜನತೆಗೆ ಮಾಡುವ ದ್ರೋಹ" ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳ ಕ್ಲಾಸ್ ತಗೆದುಕೊಂಡಿದ್ದಾರೆ.
ಆಡಳಿತದಲ್ಲಿ ಶಿಸ್ತು ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು, ಸಭೆಯ ಮಧ್ಯೆ ಯಾವುದೇ ಅಧಿಕಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದರೆ, ಸಭೆ ಮುಗಿಯುವ ವೇಳೆಗೆ ಅವರ ಅಮಾನತು ಆದೇಶ ಸಿದ್ಧವಾಗಿರುತ್ತದೆ ಎಂದು ನೇರ ಮಾತುಗಳಲ್ಲಿ ತಿಳಿಸಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕಾರ್ಯಕ್ಷೇತ್ರದಲ್ಲೇ ನೆಲೆಸಬೇಕು. ಸಣ್ಣಪುಟ್ಟ ಕೆಲಸಗಳಿಗೂ ಜನರನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿಸುವ ಸಂಸ್ಕೃತಿ ಕೊನೆಗಾಣಬೇಕು ಮತ್ತು ಸಾಧ್ಯವಾದಷ್ಟು ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಫೀಲ್ಡ್ ಆಡಳಿತವೇ ಉತ್ತಮ ಆಡಳಿತದ ಅಳತೆಗೋಲು ಎಂದ ಸಿಎಂ, ಪ್ರತಿ ಜಿಲ್ಲಾ ಮಟ್ಟದ ಅಧಿಕಾರಿಯೂ ತಮ್ಮ ಅಧೀನ ಅಧಿಕಾರಿಗಳ ನಿತ್ಯದ ಕಾರ್ಯಚಟುವಟಿಕೆಗಳು, ಗ್ರಾಮ ಭೇಟಿ ಹಾಗೂ ಸಮಸ್ಯೆಗಳ ಪರಿಹಾರದ ದಾಖಲೆಗಳನ್ನು ಪ್ರತಿದಿನ ನವೀಕರಿಸಬೇಕು ಎಂದು ನಿರ್ದೇಶಿಸಿದರು. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರ ಸ್ಥಾಪಿಸಿರುವ 'ಪ್ರಜಾಸೇವಾ ಇಲಾಖೆ'ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ತಾವೇ ಖುದ್ದಾಗಿ ನಡೆಸುತ್ತಿರುವ 'ಜನಸ್ಪಂದನ' ಮಾದರಿಯನ್ನೇ ಆಡಳಿತದ ಎಲ್ಲ ಹಂತಗಳಲ್ಲೂ ಅಳವಡಿಸಿಕೊಂಡು, ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಯಾವುದೇ ಸಮಸ್ಯೆಯನ್ನು ವಿಳಂಬ ಮಾಡದೆ ಬಗೆಹರಿಸಲು ಶಾಸಕರು, ಸಚಿವರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಸುಧಾರಣೆಗಳ ಕುರಿತು ಮಾತನಾಡಿದ ಅವರು, ಅವೈಜ್ಞಾನಿಕ ಬಡಾವಣೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ನಗರಗಳು ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನಾಬದ್ಧವಾಗಿ ಬೆಳೆಯಬೇಕು ಎಂದರು. ಇದೇ ವೇಳೆ, ಕಂದಾಯ ಇಲಾಖೆಯ 'ಇ-ಖಾತೆ ಕ್ರಾಂತಿ'ಯನ್ನು ಶ್ಲಾಘಿಸಿದ ಅವರು, ಒಂದು ರೂಪಾಯಿಯೂ ವೆಚ್ಚವಿಲ್ಲದೆ ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುವ ಈ ಮಾದರಿ ವ್ಯವಸ್ಥೆಯನ್ನು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ, ಕೆಪಿಎಸ್ ಶಾಲೆಗಳ ಯಶಸ್ವಿ ಮಾದರಿಯಲ್ಲೇ ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಸಿಎಸ್‌ಆರ್ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸರ್ಕಾರ ಮತ್ತು ಕೈಗಾರಿಕಾ ವಲಯ ಜೊತೆಯಾಗಿ ಕೆಲಸ ಮಾಡಲಿದ್ದು, ಪ್ರತಿ ಕ್ಷೇತ್ರದಲ್ಲಿ 10 ರಿಂದ 20 ಗುಣಮಟ್ಟದ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. ಹಾಗೆಯೇ, ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಕೀಯಕ್ಕೆ ಅವಕಾಶ ನೀಡದೆ, ಬಿಎಲ್‌ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದರು.
ಯುವಜನರ ಉದ್ಯೋಗಾವಕಾಶ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಸರ್ಕಾರ ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳನ್ನು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಂಪರ್ಕಿಸುವ 'ಯುವ ಉದ್ಯೋಗ ಸೇತು' ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಇದರೊಂದಿಗೆ, ಸಂವಿಧಾನದ ಮೌಲ್ಯಗಳು ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಮಾಜಕ್ಕೆ ತಲುಪಿಸಲು ರಾಜ್ಯಾದ್ಯಂತ 10,000 'ಭಾರತ್ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಂದು ಸಂಘಕ್ಕೂ ₹10 ಲಕ್ಷ ಅನುದಾನ ನೀಡುವ ಮೂಲಕ ಇದನ್ನೊಂದು ಸಾಂಸ್ಕೃತಿಕ ಚಳವಳಿಯನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.