ವಿಜಯನಗರ : ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಬರಿದಾಗುತ್ತಿದ್ದ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ. ಹೂವಿನಹಡಗಲಿ ತಾಲ್ಲೂಕಿನ ಸಿಂಗಟಾಲೂರು ಬ್ಯಾರೇಜ್‍ನಿಂದ ತುಂಗಭದ್ರಾ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್ ನೀರು ಹರಿದು ಬಂದರೆ ಸಾಕು, ರಾಜವಾಳ ಗ್ರಾಮದ ಬಳಿ ಇರುವ ಜಾಕ್‍ವೆಲ್ ನಿಂದ ಯಂತ್ರದ ಮೂಲಕ ಮಾಲವಿ ಜಲಾಶಯಕ್ಕೆ ನೀರು ಸರಾಗವಾಗಿ ಹರಿಯುತ್ತದೆ. ಈ ಹಿಂದೆ ಕೇವಲ ಜಲಾನಯನ ಪ್ರದೇಶದ ಮಳೆಯನ್ನು ಮಾತ್ರ ನೆಚ್ಚಿಕೊಂಡಿದ್ದ ಈ ಜಲಾಶಯಕ್ಕೆ, ಈಗ ತುಂಗಭದ್ರಾ ನದಿಯ ಮೂಲವೂ ಸೇರಿಕೊಂಡು ಎರಡೂ ಮೂಲಗಳು ವರದಾನವಾಗಿವೆ. ರಾಜವಾಳ ಗ್ರಾಮದ ಬಳಿ ನಿರ್ಮಿಸಲಾಗಿರುವ ಜಾಕ್‍ವೆಲ್‌ನಿಂದ ತಾಲ್ಲೂಕಿನ ಉಲವತ್ತಿಯವರೆಗೂ ಪೈಪ್‍ಲೈನ್ ಅಳವಡಿಸಲಾಗಿದ್ದು, ಅಲ್ಲಿಂದ ಜಲಾಶಯಕ್ಕೆ ನೀರು ತಲುಪುತ್ತಿದೆ.
ಸತತ 3 ತಿಂಗಳುಗಳ ಕಾಲ ಇದೇ ರೀತಿ ನೀರು ಹರಿದರೆ 2 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದೆ. ಇದರಿಂದಾಗಿ ಈ ಭಾಗದ 13 ಗ್ರಾಮಗಳ ರೈತರ ಬದುಕು ಹಸನಾಗಲಿದ್ದು, ಸುಮಾರು 15 ಸಾವಿರ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಸಾವಿರಾರು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಾಗಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಶಾಸಕ ಎಲ್.ಬಿ.ಪಿ. ಭೀಮನಾಯ್ಕ ಅವರ ಪ್ರಯತ್ನದಿಂದಾಗಿ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಹರಿಸುವ ಈ ಯೋಜನೆಗೆ ₹165 ಕೋಟಿ ಅನುದಾನ ಮಂಜೂರಾಗಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.