ಬೆಂಗಳೂರು : ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಬೂತ್ ಮಟ್ಟದ ಅಧಿಕಾರಿಗಳಿಂದ (ಬಿಎಲ್‌ಒ) ಪಡೆದ ಗಣತಿ ನಮೂನೆಯನ್ನು ಭರ್ತಿ ಮಾಡಿ, ಸಹಿಯೊಂದಿಗೆ ವಾಪಸ್ ನೀಡದಿದ್ದರೆ ಅಂತಹ ಮತದಾರರ ಹೆಸರುಗಳನ್ನು ಮುಂಬರುವ ಕರಡು ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಎಚ್ಚರಿಸಿದ್ದಾರೆ. ಆನ್ ಲೈನ್ ಅಥವಾ ಆಫ್ ಲೈನ್ ಯಾವುದೇ ಮೂಲಕ ಅರ್ಜಿ ಸಲ್ಲಿಸಿದ್ದರೂ, ಕೇವಲ ಒಂದು ಅರ್ಜಿಯನ್ನು ಮಾತ್ರವೇ ಪರಿಗಣಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಒಟ್ಟು 5.54 ಕೋಟಿ ಮತದಾರರು ಈ ಎಸ್‌ಐಆರ್ ವ್ಯಾಪ್ತಿಗೆ ಒಳಪಡಲಿದ್ದಾರೆ. ಜೂನ್ 30ರಿಂದ ಆರಂಭವಾಗಿರುವ ಈ ಮನೆ-ಮನೆ ಗಣತಿ ಕಾರ್ಯದಲ್ಲಿ ಈಗಾಗಲೇ ಜುಲೈ 8ರ ವೇಳೆಗೆ ಸುಮಾರು 4.57 ಕೋಟಿ ನಮೂನೆಗಳನ್ನು ಬಿಎಲ್‌ಒಗಳು ವಿತರಿಸಿದ್ದಾರೆ.
ಯಾರಾದರೂ ಮತದಾರರು ಬಿಎಲ್‌ಒಗಳಿಗೆ ನೇರವಾಗಿ ನಮೂನೆ ತಲುಪಿಸಲು ಸಾಧ್ಯವಾಗದಿದ್ದರೆ, ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳು (ಬಿಎಲ್‌ಎ) ತಲಾ 50 ಮತದಾರರ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಬಿಎಲ್‌ಒಗಳಿಗೆ ತಲುಪಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ 2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಪ್ರಸ್ತುತ ನೀಡಲಾಗಿರುವ ಗಣತಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಸಹಿ ಹಾಕಿ ಬಿಎಲ್‌ಒಗಳಿಗೆ ನೀಡಿದರೆ ಅವರ ಹೆಸರು ಕಡ್ಡಾಯವಾಗಿ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ವಿವರಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಅಧಿಕಾರಿಗಳು ನೋಟಿಸ್ ನೀಡಲಿದ್ದು, ಆ ವೇಳೆ ಆಯೋಗ ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕಾಗುತ್ತದೆ.
ಕಾನೂನಿನ ಚೌಕಟ್ಟನ್ನು ಮೀರಿ ಗುಂಪು ಗುಂಪಾಗಿ ಗಣತಿ ನಮೂನೆಗಳನ್ನು ವಿತರಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಕಡೆಗಳಿಂದ ದೂರುಗಳು ಬಂದಿವೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಈಗಾಗಲೇ ರಾಜ್ಯದ 35 ಬಿಎಲ್‌ಒಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅವರ ಉತ್ತರದ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಗಣತಿ ನಮೂನೆಯನ್ನು ಬಿಎಲ್‌ಒಗಳಿಗೆ ಹಿಂದಿರುಗಿಸಿದ ಬಳಿಕವೂ ಅದರಲ್ಲಿ ಏನಾದರೂ ಬದಲಾವಣೆಗಳಿದ್ದರೆ ಜುಲೈ 29ರೊಳಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಮತದಾರರ ಅನುಮತಿ ಇಲ್ಲದೆ ಬಿಎಲ್‌ಒಗಳು ಯಾವುದೇ ಬದಲಾವಣೆ ಮಾಡುವಂತಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವೂ ಮತದಾರರು 'ಫಾರ್ಮ್ 8' ಮೂಲಕ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ.