image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೇಕೆದಾಟು ಸ್ಥಳ ಬದಲಾಗದಿದ್ದರೆ 12 ಸಾವಿರ ಎಕರೆ ಕಾಡು ಮುಳುಗಡೆ: ಸಂಜಯ್ ಗುಬ್ಬಿ ಆತಂಕ

ಮೇಕೆದಾಟು ಸ್ಥಳ ಬದಲಾಗದಿದ್ದರೆ 12 ಸಾವಿರ ಎಕರೆ ಕಾಡು ಮುಳುಗಡೆ: ಸಂಜಯ್ ಗುಬ್ಬಿ ಆತಂಕ

ಚಾಮರಾಜನಗರ : ಮೇಕೆದಾಟು ಯೋಜನೆ ಈಗಿರುವ ಪ್ರದೇಶದಲ್ಲೇ ಜಾರಿಯಾದರೆ ಸುಮಾರು 12 ಸಾವಿರ ಎಕರೆ ಕಾಡು ಮುಳುಗಡೆಯಾಗಲಿದ್ದು, 5 ರಿಂದ 6 ಲಕ್ಷ ಮರಗಳು ನಾಶವಾಗಲಿವೆ. ಆದ್ದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಯೋಜನೆಯ ಸ್ಥಳ ಬದಲಾಗಬೇಕು ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಒತ್ತಾಯಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮವು ಪತ್ರಕರ್ತರಿಗಾಗಿ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಮತ್ತು ವನ್ಯ ಪ್ರಾಣಿಗಳ ನಡವಳಿಕೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಗುರುತಿಸಲಾಗಿರುವ ಜಾಗದ ಬದಲಿಗೆ ಮೇಕೆದಾಟು ಯೋಜನೆಯನ್ನು ಶಿವನಸಮುದ್ರದಲ್ಲಿ ಅನುಷ್ಠಾನಗೊಳಿಸಿದರೆ ಪರಿಸರವನ್ನು ಉಳಿಸಬಹುದಾಗಿದೆ. ಈಗಾಗಲೇ ರಾಮನಗರ ಮತ್ತು ಮಳವಳ್ಳಿ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಈಗಿರುವ ಜಾಗದಲ್ಲೇ ಆಣೆಕಟ್ಟು ಕಟ್ಟಿದರೆ ವನ್ಯಜೀವಿಗಳ ಆವಾಸಸ್ಥಾನ ಬದಲಾಗಿ, ಈ ಸಂಘರ್ಷ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಪರಿಸರ ವ್ಯವಸ್ಥೆಯು ಅತ್ಯಂತ ಕ್ಲಿಷ್ಟಕರವಾಗಿದ್ದು, ಆಹಾರದ ಒಂದು ಕೊಂಡಿ ಕಳಚಿದರೂ ಜೈವಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅರಣ್ಯ ಮತ್ತು ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ನಿಂತಷ್ಟೂ ಪರಿಸರ ಸುಸ್ಥಿರವಾಗಿರುತ್ತದೆ. ಅರಣ್ಯೀಕರಣದ ಹೆಸರಿನಲ್ಲಿ ನಾವು ಮಾಡುವ ಕೆಲವು ತಪ್ಪು ಕಾರ್ಯವಿಧಾನಗಳು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು ಎಂದ ಅವರು, ಜಿಲ್ಲೆಯಲ್ಲಿ ಚಿರತೆ ಮತ್ತು ಮಾನವ ಸಂಘರ್ಷ ಹೆಚ್ಚಾಗಲು ನೈಸರ್ಗಿಕ ಬೇಟೆ ಪ್ರಾಣಿಗಳ ಕೊರತೆ ಹಾಗೂ ಬೇರೆಡೆ ಸೆರೆಹಿಡಿದ ಚಿರತೆಗಳನ್ನು ತಂದು ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಕ್ಕೆ ಬಿಟ್ಟಿರುವುದೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿಧಾಮವು ಜನವಸತಿ ಮತ್ತು ಅಂತರರಾಜ್ಯ ಗಡಿಯನ್ನು ಒಳಗೊಂಡಿದೆ. ಸುಮಾರು 15 ಗ್ರಾಮಗಳು ದಟ್ಟಾರಣ್ಯದಲ್ಲೇ ಇವೆ. ನಮಗೆ ಜನರಷ್ಟೇ ವನ್ಯಜೀವಿಗಳೂ ಮುಖ್ಯವಾಗಿದ್ದು, ಇವೆರಡರ ನಡುವೆ ಸಮತೋಲನ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು. ರೈತರು ಮಣ್ಣು ಮತ್ತು ನೀರಿಗೆ ಪ್ರಾಮುಖ್ಯತೆ ನೀಡುವ ಜೊತೆಗೆ ವನ್ಯಜೀವಿಗಳ ಬಗ್ಗೆಯೂ ಸಹಾನುಭೂತಿ ಹೊಂದಿರಬೇಕು. ನಮ್ಮ ಮೂಲಭೂತ ಹಕ್ಕುಗಳೊಂದಿಗೆ ಜವಾಬ್ದಾರಿಗಳ ಅರಿವೂ ಇರಬೇಕು ಎಂದು ತಿಳಿಸಿದ ಅವರು, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದು ಎಂದು ಆಶಯ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ