ಬಾಗಲಕೋಟೆ : ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಉಳಿದ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ ಬರ ನಿರ್ವಹಣೆಗೆ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಆಗ್ರಹಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಶೇ. 60 ರಷ್ಟು ಮಳೆ ಕೊರತೆಯಾಗಿದ್ದು, ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸರ್ಕಾರ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಮತ್ತು ಅಗತ್ಯ ನೆರವು ಒಡಗಿಸಲು ಸಮಗ್ರ ಕಾರ್ಯಯೋಜನೆ (SOP) ರೂಪಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಲ್ಲಿ 2,850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕೃಷಿ ಇಲಾಖೆ ಮೂಲಕ ಅಲ್ಪಾವಧಿ ಬೆಳೆಗಳ ಬಿತ್ತನೆ ಬೀಜಗಳನ್ನು ಒದಗಿಸಬೇಕು, ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಬೇಕು ಮತ್ತು ರಾಜ್ಯದ ಮೇವು ಹೊರರಾಜ್ಯಗಳಿಗೆ ಹೋಗದಂತೆ ತಡೆಯಬೇಕು ಎಂದರು. ಇದರೊಂದಿಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದಂತೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಹೆಚ್ಚುವರಿ 4,000 ರೂಪಾಯಿ ಧನಸಹಾಯವನ್ನು ಜುಲೈ ತಿಂಗಳಿನಿಂದಲೇ ಮರುಜಾರಿಗೊಳಿಸಬೇಕು, ಹಾಲಿನ ಪ್ರೋತ್ಸಾಹಧನ ಹಾಗೂ ಕೃಷಿ ಸಬ್ಸಿಡಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಗ್ರಾಮಗಳೇ ಗುಳೆ ಹೋಗುತ್ತಿರುವುದನ್ನು ತಡೆಯಲು ಎಂಜಿಎನ್‌ಆರ್‌ಇಜಿಎ ಅಡಿ ಉದ್ಯೋಗ ಸೃಷ್ಟಿಸಬೇಕು ಮತ್ತು ಬೆಳೆ ಹಾನಿಯ ವೈಜ್ಞಾನಿಕ ವರದಿ ಸಲ್ಲಿಸಿ ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಪರಿಹಾರ ತಲುಪಿಸಬೇಕು ಎಂದು ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 20 ರಿಂದ 25 ಸಾವಿರ ಕೋಟಿ ರೂ. ಮೀಸಲಿಡದಿದ್ದರೆ ಯೋಜನೆಗೆ ಶತಮಾನೋತ್ಸವ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಬಾಗಲಕೋಟೆ ವೈದ್ಯಕೀಯ ಕಾಲೇಜು, ಜವಳಿ ಪಾರ್ಕ್ ಹಾಗೂ ಬೀಳಗಿ ಏತ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿದರು.
ಇದೇ ವೇಳೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿದ್ದು, ಮನೆ ಮನೆಗೆ ತೆರಳುವ ಬದಲು ಮಸೀದಿ ಹಾಗೂ ಶಾದಿ ಮಹಲ್‌ಗಳಲ್ಲಿ ಸಾಮೂಹಿಕವಾಗಿ ಅರ್ಜಿ ಹಂಚಲಾಗುತ್ತಿದೆ ಎಂದು ಆಕ್ಷೇಪಿಸಿದ ಸಿ. ಟಿ. ರವಿ, ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ತಿಳಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ದರ ಶೇ. 60ಕ್ಕೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರ ಸಂಘವೇ ಆರೋಪಿಸಿದೆ ಹಾಗೂ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ದುರುಪಯೋಗ ನಡೆದಿದೆ ಎಂದು ದೂರಿದ ಅವರು, ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ಡ್ರಗ್ಸ್ ಹಾಗೂ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರದ ಮೇಲಿನ ಜನರ ವಿಶ್ವಾಸ ಕುಸಿದಿದೆ ಎಂದು ವೀರೋಧ ವ್ಯಕ್ತಪಡಿಸಿದರು.