ಹುಬ್ಬಳ್ಳಿ : ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ನೆರವಿಗೆ ಹಾವೇರಿ ಜಿಲ್ಲೆಯ ಶಾಸಕರು ಮುಂದಾಗಿದ್ದು, ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟಿದೆ. ಇದರಿಂದ ಈಗಾಗಲೇ ಹೆಸರು, ಉದ್ದು, ಹತ್ತಿ, ಮೆಣಸಿನಕಾಯಿ ಬಿತ್ತನೆ ಮಾಡಿ ಆತಂಕದಲ್ಲಿದ್ದ ರೈತರಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ಪ್ರಕ್ರಿಯೆ ಆರಂಭಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಈ ಮೋಡ ಬಿತ್ತನೆ ವಿಮಾನಕ್ಕೆ ಹಸಿರು ನಿಶಾನೆ ತೋರಿದರು.
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರ ನೇತೃತ್ವದಲ್ಲಿ, ಅವರದೇ ಪಾಲುದಾರಿಕೆಯ ಸಂಸ್ಥೆಯ ವಿಮಾನದ ಮೂಲಕ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್, ರಾಣೆಬೆನ್ನೂರು, ಸವಣೂರು ಸೇರಿದಂತೆ ಹಲವೆಡೆ ಸಿಲ್ವರ್ ಅಯೋಡೈಡ್ ರಾಸಾಯನಿಕ ಸಿಂಪಡಿಸಿ ಮೋಡ ಬಿತ್ತನೆ ಮಾಡಲಾಯಿತು. ಗಂಟೆಗೆ ಬರೋಬ್ಬರಿ 15 ಲಕ್ಷ ರೂಪಾಯಿ ವೆಚ್ಚದ ಈ ಯೋಜನೆಯನ್ನು ಸದ್ಯ ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದು, ಅವಶ್ಯಕತೆ ಬಿದ್ದರೆ ಒಂದು ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. ಇಂದಿನ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು, ಹಾವೇರಿ ಜಿಲ್ಲೆಯ ಹಲವೆಡೆ ಈಗಾಗಲೇ ಮಳೆಯಾಗಿದೆ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಸರ್ಕಾರದ ನೆರವು ಸಿಗದಿದ್ದಾಗ, ಜನಪ್ರತಿನಿಧಿಗಳೇ ಈ ಮಹತ್ವದ ನಿರ್ಧಾರ ಕೈಗೊಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.