image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವೋಟರ್ ಲಿಸ್ಟ್ ಪರಿಷ್ಕರಣೆ ಗೊಂದಲ: ಚುನಾವಣಾ ಆಯೋಗದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

ವೋಟರ್ ಲಿಸ್ಟ್ ಪರಿಷ್ಕರಣೆ ಗೊಂದಲ: ಚುನಾವಣಾ ಆಯೋಗದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳಿಗೆ ಹಾಗೂ ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ಚುನಾವಣಾ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್‌ಐಆರ್ ಗೊಂದಲಗಳಿಗೆ ರಾಜ್ಯ ಸರ್ಕಾರ ಕಾರಣವಲ್ಲ, ಆಯೋಗವೇ ನೇರ ಹೊಣೆ ಎಂದು ಸ್ಪಷ್ಟಪಡಿಸಿರುವ ಅವರು, "ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಜವಾಬ್ದಾರಿ ಅವರದ್ದೇ ತಾನೆ?" ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಸ್‌ಐಆರ್ ಪ್ರಕ್ರಿಯೆಯ ಸುತ್ತಲಿನ ಆತಂಕಗಳು ಮತ್ತು ವಿಪಕ್ಷಗಳ ಹೇಳಿಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಎಸ್‌ಐಆರ್ ಲೋಪದ ಕುರಿತಾದ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಏನೇ ಮಾಡಿದರೂ ಕಾನೂನು ಮೀರಿ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಚುನಾವಣಾ ಆಯೋಗದ ವೀಕ್ಷಕರು ಇದ್ದೇ ಇರುತ್ತಾರೆ ಎಂದು ನೆನಪಿಸಿದರು. ಒಂದು ವೇಳೆ ಎಲ್ಲಾದರೂ ಲೋಪವಾಗಿದ್ದರೆ ಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಮುಕ್ತ ಅಧಿಕಾರವಿದೆ. ರಾಜ್ಯ ಸರ್ಕಾರದವರೇನೂ ಯಾರಿಗೂ ಒತ್ತಾಯ ಮಾಡಿ ಎಸ್‌ಐಆರ್ ಮಾಡಿಸುತ್ತಿಲ್ಲ. ಸಮುದಾಯ ಭವನದಲ್ಲೋ ಇಲ್ಲವೇ ಕಚೇರಿಯಲ್ಲೋ ಕುಳಿತು ಮಾಡಿ ಎಂದು ನಾವು ಯಾರಿಗೂ ಬಲವಂತ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಸಂಶಯಗಳಿರುವುದು ನಿಜ ಎಂದ ಸಚಿವರು, ಈ ಹಿನ್ನೆಲೆಯಲ್ಲಿ ತಾವು ಚುನಾವಣಾ ಆಯೋಗಕ್ಕೆ 12 ಪ್ರಮುಖ ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದರೂ, ಆಯೋಗ ಇದುವರೆಗೆ ಒಂದಕ್ಕೂ ಉತ್ತರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ಅನುಮಾನಗಳು ಇವೆ ಎಂದರೆ ಅದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ, ಚುನಾವಣಾ ಆಯೋಗವೇ ನೇರವಾಗಿ ಉತ್ತರಿಸಬೇಕು ಎಂದು ಬಲವಾಗಿ ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ