ಬೆಂಗಳೂರು : ಬೆಂಗಳೂರಿನ ಕ್ವಾರಿಯಲ್ಲಿ ಬಂಡೆ ಕುಸಿದು ಎಂಟು ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ ರವಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಟ್ಟೆಪಾಡಿಗಾಗಿ ಬಂದ ಬಡ ಕಾರ್ಮಿಕರು ಈ ದುರಂತದಲ್ಲಿ ಜೀವ ಕಳೆದುಕೊಂಡಿರುವುದು ನೋವಿನ ಸಂಗತಿ. ಗಣಿಗಾರಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ನಿಯಮಗಳು ಇಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದು ತಿಳಿಯಬೇಕಾಗಿದೆ ಎಂದರು.
ಮೃತರ ಕುಟುಂಬಗಳಿಗೆ ಸರ್ಕಾರ ತಕ್ಷಣ ಸಾಂತ್ವನ ಹೇಳಿ, ಸೂಕ್ತ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದ ಅವರು, ಪರಿಹಾರದಿಂದ ಹೋದ ಜೀವ ಮರಳಿ ತರಲು ಸಾಧ್ಯವಿಲ್ಲದಿದ್ದರೂ ಆ ಕುಟುಂಬಗಳಿಗೆ ಆರ್ಥಿಕ ಭದ್ರತೆ ಸಿಗುತ್ತದೆ ಎಂದರು. ಇದೇ ವೇಳೆ ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆಗೂ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಈ ಪ್ರಕರಣದಲ್ಲಿ ಗಣಿಗಾರಿಕೆಯು ಪರವಾನಗಿ ಪಡೆದು ನಡೆಯುತ್ತಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಗಣಿ ಇಲಾಖೆ ತನಿಖೆ ನಡೆಸಿ ಸ್ಪಷ್ಟ ಮಾಹಿತಿ ನೀಡಬೇಕು. ಇಲಾಖೆಯ ಮುಖ್ಯಸ್ಥರು ನಿಯಮಗಳ ಕಟ್ಟುನಿಟ್ಟಾದ ಪಾಲನೆಗೆ ಗಮನ ಹರಿಸಿದರೆ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದರು. ಒಂದು ವೇಳೆ ವಿಧಾನಸೌಧದ ಅತ್ಯಂತ ಹತ್ತಿರದಲ್ಲೇ ನಡೆಯುತ್ತಿದ್ದ ಈ ಗಣಿಗಾರಿಕೆ ಅಕ್ರಮವಾಗಿದ್ದರೆ, ಅದಕ್ಕೆ ಆಳುವವರ ಕುಮ್ಮಕ್ಕೇ ಕಾರಣವಾಗಿದ್ದು, ಈ ದುರ್ಘಟನೆಯ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಸಿ.ಟಿ ರವಿ ಎಚ್ಚರಿಸಿದರು.