ರಾಮನಗರ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. "ಸರ್ಕಾರ ಬರುತ್ತೆ ಹೋಗುತ್ತೆ, ಮುಖ್ಯಮಂತ್ರಿಗಳೂ ಬರ್ತಾರೆ ಹೋಗ್ತಾರೆ. ನಿಮ್ಮ ಮುಖ್ಯಮಂತ್ರಿ ಗೂಟ ಹೊಡೆದುಕೊಂಡು ಇರಲ್ಲ" ಎಂದು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
ನಿಯಮ ಉಲ್ಲಂಘಿಸಿದ ಬಿಎಲ್‌ಒಗಳಿಗೆ ಕೇವಲ ನೋಟಿಸ್ ನೀಡಿ ನಾಟಕ ಮಾಡಲಾಗುತ್ತಿದ್ದು, ಕೂಡಲೇ ಅವರೆಲ್ಲರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ರಾಮನಗರದ 35 ಸೂಕ್ಷ್ಮ ಮತಗಟ್ಟೆಗಳ ಎಸ್‌ಐಆರ್ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವೇ ಖುದ್ದಾಗಿ ನಡೆಸಬೇಕು. ಅಕ್ರಮದ ಎಲ್ಲಾ ವೀಡಿಯೋ ಸಾಕ್ಷ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ರಾಜ್ಯ ಚುನಾವಣಾ ಆಯೋಗ ಹಾಗೂ ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು. ಅಗತ್ಯಬಿದ್ದರೆ ಪಶ್ಚಿಮ ಬಂಗಾಳದಂತೆ ಸೆಂಟ್ರಲ್ ಫೋರ್ಸ್ ತಂದು ಎಸ್‌ಐಆರ್ ನಡೆಸುವಂತೆ ಒತ್ತಾಯಿಸುತ್ತೇವೆ ಎಂದರು. ದೆಹಲಿಯಲ್ಲಿ ಕುಳಿತು ವೋಟ್ ಚೋರಿ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಅವರು ಕರ್ನಾಟಕದಲ್ಲಿ ತಮ್ಮದೇ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಬಂದು ನೋಡಲಿ. ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲೇ ಪ್ರೆಸ್‌ಮೀಟ್ ಮಾಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿರುವ ಯೋಜನೆಗಳು 30 ಸಾವಿರ ಕೋಟಿ ದಾಟುತ್ತಿವೆ. ಇದನ್ನು ನೋಡಿದರೆ ದೆಹಲಿಯ ಗಾಂಧಿ ಕುಟುಂಬಕ್ಕೆ ಇವರು ಯಾವುದೋ ದೊಡ್ಡ ಕಮಿಟ್‌ಮೆಂಟ್ ಕೊಟ್ಟು ಬಂದ ಹಾಗೆ ಕಾಣುತ್ತಿದೆ. ಸುಮಾರು 9 ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದು ಚುನಾವಣೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಮುಸ್ಲಿಮರ ವಾರ್ಡುಗಳಾದ ಟಿಪ್ಪುನಗರ, ಯಾರಬ್‌ನಗರ, ಮೆಹಬೂಬ್ ನಗರಗಳಲ್ಲಿ ಅಕ್ರಮವಾಗಿ ಎಸ್‌ಐಆರ್ ನಡೆಯುತ್ತಿದ್ದು, ಅಲ್ಲಿಗೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ. ಆದರೂ ನಮ್ಮ ಕಾರ್ಯಕರ್ತರು ಧೈರ್ಯ ಮಾಡಿ ಒಳಗೆ ಹೋಗಿ ವಿಡಿಯೋ ಸಾಕ್ಷ್ಯ ತಂದಿದ್ದಾರೆ. ಇದನ್ನು ನೋಡಿದರೆ ರಾಮನಗರ ಮುಂದೆ 'ರಹೀಂನಗರ' ಆಗುತ್ತೋ ಏನೋ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧ ಹೊರರಾಜ್ಯದ ಜನರನ್ನು ತಂದು ಕಳ್ಳ ಮತದಾನ ಮಾಡಿಸಿ ಗೆದ್ದಿದ್ದರು. ಚನ್ನಪಟ್ಟಣ ಉಪಚುನಾವಣೆಯಲ್ಲೂ ರಾಮನಗರದಿಂದ ಆಟೋಗಳಲ್ಲಿ ಬಂದು ಜನ ಮತ ಹಾಕಿದರು. ಈಗಲೂ ರಾಮನಗರದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದ ಅವರು, ಐಎಎಸ್ ಓದಿರುವ ಜಿಲ್ಲಾಧಿಕಾರಿಗೆ ಮೂಲ ನಿಯಮಗಳೇ ಗೊತ್ತಿಲ್ಲ. ಅರ್ಜಿ ಹಂಚುವಾಗ ಮೂರೂ ಪಕ್ಷಗಳ ಬಿಎಲ್‌ಒಗಳು ಇರಬೇಕು, ಮೂರು ಬಾರಿ ಮನೆಮನೆಗೆ ಹೋಗಿ ಹಂಚಬೇಕು. ಆದರೆ ರಾಮನಗರ ಡೀಸಿ ತಾನೇ ಹೊಸ ಕಾನೂನು ಬರೆದಂತೆ ವರ್ತಿಸುತ್ತಾ ನನ್ನನ್ನೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು.