image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ: ಪರಂಪರೆಗೆ ಧಕ್ಕೆ ಎಂದ ಸಂಸದ ಯದುವೀರ್

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ: ಪರಂಪರೆಗೆ ಧಕ್ಕೆ ಎಂದ ಸಂಸದ ಯದುವೀರ್

ಮೈಸೂರು : ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಮೈಸೂರಿನ ಜನರಿಗೆ ಪರಿಚಯಿಸುವ ಹಾಗೂ ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರವು ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಮುಂದಾಗಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸ್ಥಳೀಯವಾಗಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಸುಮಾರು 7 ರಿಂದ 8 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಎರಡು ದಿನಗಳ ಕಾಲ ಈ ಕಂಬಳ ಉತ್ಸವವನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಮೈಸೂರಿನ ವಿಜಯನಗರ - ಸಾತಗಳ್ಳಿ ರಿಂಗ್ ರಸ್ತೆ ಹತ್ತಿರ ಇದಕ್ಕಾಗಿ ಸ್ಥಳವನ್ನು ಗುರುತಿಸಲಾಗಿದ್ದು, ಕರಾವಳಿ ಭಾಗದಿಂದ ಸುಮಾರು 120 ಜೋಡಿ ಕೋಣಗಳನ್ನು ಕರೆತರುವ ಸಾಧ್ಯತೆ ಇದೆ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವೆಚ್ಚ ಮಾಡಿ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಅವಶ್ಯಕತೆ ಏನಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ಯೋಜನೆಗೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾದಲ್ಲಿ ಕಂಬಳ ಅಳವಡಿಸಿಕೊಳ್ಳುವ ಕುರಿತು ಆಳವಾದ ಮರುಚಿಂತನೆಯ ಅಗತ್ಯವಿದೆ ಎಂದಿರುವ ಅವರು, ಕಂಬಳವು ಕರಾವಳಿ ಕರ್ನಾಟಕದ ಮಣ್ಣು, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಶತಮಾನಗಳ ಇತಿಹಾಸವಿರುವ ಪವಿತ್ರ ಪರಂಪರೆಯಾಗಿದೆ ಎಂದು ಹೇಳಿದ್ದಾರೆ. ಇದನ್ನು ಕೇವಲ ವಾಣಿಜ್ಯೀಕರಣ ಅಥವಾ ಮನರಂಜನೆಯ ದೃಷ್ಟಿಕೋನದಿಂದ ನೋಡಿ ಇದರ ಘನತೆಯನ್ನು ಕುಂದಿಸಬಾರದು ಹಾಗೂ ಅದರ ಮೂಲ ನೆಲದಿಂದ ಬೇರ್ಪಡಿಸಿ ಆಂತರಿಕ ಪವಿತ್ರತೆಗೆ ಧಕ್ಕೆ ತರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದಸರಾ ಮಹೋತ್ಸವದ ಸಂಘಟನೆಯಲ್ಲಿ ಇನ್ನೂ ಹಲವು ಆಡಳಿತಾತ್ಮಕ ಲೋಪದೋಷಗಳು, ಮೂಲಸೌಕರ್ಯಗಳ ಕೊರತೆ ಹಾಗೂ ವ್ಯವಸ್ಥಿತ ಸವಾಲುಗಳಿದ್ದು, ಸರ್ಕಾರ ಮತ್ತು ದಸರಾ ಉನ್ನತ ಮಟ್ಟದ ಸಮಿತಿಯು ಮೊದಲು ಈ ಆಂತರಿಕ ಸವಾಲುಗಳನ್ನು ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಗಮನವು ಮೈಸೂರು ದಸರಾದ ಮೂಲ ಸ್ವರೂಪವನ್ನು ಮತ್ತಷ್ಟು ಬಲಪಡಿಸುವುದರ ಕಡೆಗೆ ಇರಬೇಕು ಎಂದು ಯದುವೀರ್ ಒಡೆಯರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ