image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೊಡಗು ಆನೆ ಸಂಘರ್ಷ ನಿವಾರಣೆಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ: ಐದು ವರ್ಷಗಳ ಯೋಜನೆಯಡಿ ₹350 ಕೋಟಿ ವೆಚ್ಚ ನಿರೀಕ್ಷೆ

ಕೊಡಗು ಆನೆ ಸಂಘರ್ಷ ನಿವಾರಣೆಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ: ಐದು ವರ್ಷಗಳ ಯೋಜನೆಯಡಿ ₹350 ಕೋಟಿ ವೆಚ್ಚ ನಿರೀಕ್ಷೆ

ಮೈಸೂರು : ಕೊಡಗು ಜಿಲ್ಲೆಯ ಪ್ರಮುಖ ಕಳಕಳಿಯಾದ ಮಾನವ–ಆನೆ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮನವಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಸಂಸದರು ಸಲ್ಲಿಸಿದ್ದ ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಕೊಡಗಿನ ಅರಣ್ಯ ಅಂಚಿನ ಪ್ರದೇಶಗಳ ರೈತರು, ತೋಟಗಾರರು ಹಾಗೂ ಸ್ಥಳೀಯ ನಿವಾಸಿಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ಹಾಗೂ ತಾಂತ್ರಿಕ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಸ್ತುತ ಕೇಂದ್ರ ಸಚಿವಾಲಯವು ವನ್ಯಜೀವಿ ವಾಸಸ್ಥಳಗಳ ಅಭಿವೃದ್ಧಿ ಹಾಗೂ ಪ್ರಾಜೆಕ್ಟ್ ಟೈಗರ್ ಮತ್ತು ಎಲೆಫೆಂಟ್ ನಂತಹ ಕೇಂದ್ರ ಪ್ರಾಯೋಜಿತ ಯೋಜನೆಗಳ ಮೂಲಕ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಇದರೊಂದಿಗೆ, ದಕ್ಷಿಣ ಭಾರತದಲ್ಲಿನ ಮಾನವ-ಆನೆ ಸಂಘರ್ಷ ತಡೆಯಲು ಪ್ರಾದೇಶಿಕ ಕಾರ್ಯಯೋಜನೆಯನ್ನು (Regional Action Plan) ಸಿದ್ಧಪಡಿಸಲಾಗುತ್ತಿದ್ದು, ಇದರಲ್ಲಿ ಕೊಡಗನ್ನು ಪ್ರಮುಖ ಸಂಘರ್ಷ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ. ಈ ವಿಶೇಷ ಐದು ವರ್ಷಗಳ ಕಾರ್ಯಯೋಜನೆಗಾಗಿ ಸುಮಾರು ₹350 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು, ಆನೆಗಳ ವಾಸಸ್ಥಳ ಸುಧಾರಣೆ, ಆನೆ ಕಾರಿಡಾರ್‌ಗಳ ಸಂರಕ್ಷಣೆ, ಮುನ್ನೆಚ್ಚರಿಕಾ ಎಚ್ಚರಿಕೆ ವ್ಯವಸ್ಥೆ, ತ್ವರಿತ ಪ್ರತಿಕ್ರಿಯೆ ಪಡೆಗಳ ನಿಯೋಜನೆ ಹಾಗೂ ಸ್ಥಳೀಯ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯಂತಹ ಪ್ರಮುಖ ಐದು ಅಂಶಗಳ ಮೇಲೆ ಇದು ಕೇಂದ್ರೀಕರಿಸಲಿದೆ. ಈ ಮೂಲಕ ಆನೆಗಳು ಕೃಷಿ ಭೂಮಿ ಹಾಗೂ ಮಾನವ ವಾಸಸ್ಥಳಗಳಿಗೆ ನುಗ್ಗುವುದನ್ನು ತಡೆದು, ಜೀವ ಮತ್ತು ಆಸ್ತಿ ನಷ್ಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಯೋಜಿಸಲಾಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ವನ್ಯಜೀವಿ ಸಂಸ್ಥೆಯು (Wildlife Institute of India) ದಕ್ಷಿಣ ಭಾರತದಲ್ಲಿ ಮಾನವ–ಆನೆ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಉಪಗ್ರಹ ಟೆಲಿಮೆಟ್ರಿ ಮತ್ತು ಸಮೂಹ ಸಂವಹನ ಆಧಾರಿತ ಸುಧಾರಿತ ಮುನ್ನೆಚ್ಚರಿಕಾ ವ್ಯವಸ್ಥೆ ಕುರಿತು ವೈಜ್ಞಾನಿಕ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಈ ಅಧ್ಯಯನದ ವರದಿ ಹಾಗೂ ಶಿಫಾರಸುಗಳ ಆಧಾರದ ಮೇಲೆ ಕೊಡಗು ಜಿಲ್ಲೆಯಲ್ಲಿ ಅತ್ಯಾಧುನಿಕ ಮುನ್ನೆಚ್ಚರಿಕಾ ತಂತ್ರಜ್ಞಾನವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಈ ತ್ವರಿತ ಮತ್ತು ಸಕಾರಾತ್ಮಕ ಸ್ಪಂದನೆಯನ್ನು ಸಂಸದ ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ. ಮಾನವ ಜೀವ ಹಾಗೂ ವನ್ಯಜೀವಿಗಳ ರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಳ್ಳುವ ದೀರ್ಘಕಾಲಿಕ ಪರಿಹಾರಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು, ಅರಣ್ಯ ಇಲಾಖೆ ಹಾಗೂ ಸ್ಥಳೀಯ ನಿವಾಸಿಗಳ ನಡುವೆ ನಿರಂತರ ಸಮನ್ವಯ ಅತ್ಯಗತ್ಯವಾಗಿದ್ದು, ಕೊಡಗಿನ ಜನರ ಹಿತರಕ್ಷಣೆಗಾಗಿ ತಾವು ಸದಾ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ