image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರ

ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರ

ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವೂ ಬಿರುಸಿನಿಂದ ಮುಂದುವರಿದಿದೆ. ಮೊದಲ ದಿನ 63.6 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಗುರುವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮತ್ತೊಮ್ಮೆ 39 ಕಿ.ಮೀ. ವ್ಯಾಪ್ತಿಯಲ್ಲಿ ತಳ್ಳುಗಾಡಿ, ಪೆಟ್ಟಿ ಅಂಗಡಿ ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿದರು. ಇದಕ್ಕಾಗಿ ಜೆಸಿಬಿ, ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಲಾಗಿದ್ದು, ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 7 ಕಿ.ಮೀ., ಉತ್ತರದಲ್ಲಿ 12.70 ಕಿ.ಮೀ., ದಕ್ಷಿಣದಲ್ಲಿ 11 ಕಿ.ಮೀ. ಹಾಗೂ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 8.55 ಕಿ.ಮೀ. ರಸ್ತೆಯನ್ನು ಮುಕ್ತಗೊಳಿಸಲಾಗಿದೆ.

ಕೆ.ಆರ್. ಮಾರುಕಟ್ಟೆ ಮತ್ತು ಮೆಜೆಸ್ಟಿಕ್ ಪ್ರದೇಶಗಳಲ್ಲಿ ಕಾರ್ಯಾಚರಣೆ ವೇಳೆ ತೀವ್ರ ಆಕ್ರೋಶ, ಕಣ್ಣೀರು ಮತ್ತು ಹೈಡ್ರಾಮಾಗಳು ನಡೆದವು. ವರ್ಷಗಳಿಂದ ವ್ಯಾಪಾರ ನಂಬಿ ಬದುಕುತ್ತಿದ್ದ ತಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಸೆಲ್ವಿ ಕಣ್ಣೀರಿಟ್ಟು ಹಿಡಿಶಾಪ ಹಾಕಿದರು. ಮೆಜೆಸ್ಟಿಕ್‌ನಲ್ಲಿ ವ್ಯಾಪಾರಿಗಳು ತಡೆ ಒಡ್ಡಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದಾಗ್ಯೂ, ಮೆಜೆಸ್ಟಿಕ್‌ನಲ್ಲಿ ಸಂಜೆಯಾಗುತ್ತಿದ್ದಂತೆ ಮತ್ತೆ ಕೆಲವು ಅಂಗಡಿಗಳು ತಲೆಎತ್ತಿರುವುದು ಕಂಡುಬಂದಿದೆ. ಕಾರ್ಪೊರೇಷನ್ ಸರ್ಕಲ್, ಮಿಷನ್ ರಸ್ತೆ ಮತ್ತು ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ನಡೆದ ತೆರವು ಕಾರ್ಯದಲ್ಲಿ 80 ಕಾರ್ಮಿಕರು ಭಾಗವಹಿಸಿದ್ದರು.

ಈ ಕುರಿತು ವರ್ಚುವಲ್ ಸಭೆ ನಡೆಸಿ ವಿಡಿಯೋ ಸಂದೇಶ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ಬೀದಿಬದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುತ್ತಿಲ್ಲ, ಬದಲಿಗೆ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಾದಚಾರಿಗಳ ಹಿತದೃಷ್ಟಿಯಿಂದ ಅಡೆತಡೆಗಳು, ಅನಾಥ ವಾಹನಗಳು ಹಾಗೂ ಅಕ್ರಮ ಪಾರ್ಕಿಂಗ್‌ಗಳನ್ನು ಕೂಡ ತೆರವುಗೊಳಿಸಿ, ತಕ್ಷಣವೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಬೆಂಗಳೂರನ್ನು ಸುಂದರ ಮತ್ತು ಸುರಕ್ಷಿತ ನಗರವಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಅಧಿಕಾರಿಗಳೊಂದಿಗೆ ಹೊರ ವರ್ತುಲ ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ರಾತ್ರಿ ನಗರ ಪ್ರದಕ್ಷಿಣೆ ನಡೆಸಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಸಚಿವರು, "ಜನ ಸಾಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ನಿಮ್ಮ ಕೆಲಸ ಮಾಡಲು ನಾವು ಬಂದು ಬೇಡಬೇಕೇ?" ಎಂದು ನಿರ್ಲಕ್ಷ್ಯ ವಹಿಸಿದ ಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊರವಲಯ ರಸ್ತೆಯ ಮರು ಅಭಿವೃದ್ಧಿ ಯೋಜನೆ ಅಂತಿಮಗೊಳಿಸುವ ಮುನ್ನ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸುವುದಾಗಿ ಅವರು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ