ಚಿಕ್ಕಮಗಳೂರು : ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ನಿಗದಿಪಡಿಸಿರುವ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ ಇರುವ 32 ಸಾವಿರ ರೂಪಾಯಿಗಳಿಂದ 1.20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ವಿಶೇಷ ಮನವಿ ಸಲ್ಲಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಸಂದೇಹಾಸ್ಪದ ಪ್ರಕರಣಗಳನ್ನು 'ಸಂಯೋಜನೆ' ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದಾಗಿ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಅನೇಕ ಹಿರಿಯ ನಾಗರಿಕರಲ್ಲಿ ಪಿಂಚಣಿ ಕೈತಪ್ಪುವ ಆತಂಕ ಮೂಡಿದೆ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ, ವಿವಿಧ ಪಿಂಚಣಿಗಳನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯದ ಮಿತಿ ಕೇವಲ 32 ಸಾವಿರ ರೂಪಾಯಿ ಮಾತ್ರ ಇದೆ. ಆದರೆ, ಈಗಾಗಲೇ ಪಿಂಚಣಿ ಪಡೆಯುತ್ತಿರುವ ಬಡ ಕುಟುಂಬಗಳ ಸದಸ್ಯರ ಆದಾಯ ಪ್ರಮಾಣ ಪತ್ರದಲ್ಲಿ ಈ ಮಿತಿಗಿಂತ ಸ್ವಲ್ಪ ಹೆಚ್ಚು ಆದಾಯ ದಾಖಲಾಗಿದ್ದರೂ, ಅವರ ಪಿಂಚಣಿ ಮಂಜೂರಾತಿಯನ್ನು ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ವಾರ್ಷಿಕ ಆದಾಯದ ಮಿತಿ 32 ಸಾವಿರಕ್ಕಿಂತ ಕೇವಲ ಒಂದು ರೂಪಾಯಿ ಹೆಚ್ಚಿದ್ದರೂ ಪಿಂಚಣಿ ರದ್ದಾಗುವ ಸಾಧ್ಯತೆ ಇರುವುದರಿಂದ, ಅನೇಕ ವಯೋವೃದ್ಧರು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸಿ.ಟಿ. ರವಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಬಿಪಿಎಲ್ ಪಡಿತರ ಚೀಟಿಗೆ ನಿಗದಿಪಡಿಸಿರುವ ಮಾದರಿಯಲ್ಲೇ, ಪಿಂಚಣಿ ಯೋಜನೆಗೂ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. ಈ ರೀತಿ ಆದಾಯದ ಮಿತಿಯನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸಂಖ್ಯೆಯ ಬಡ ಹಿರಿಯ ನಾಗರಿಕರು ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಇದು ಸಾಮಾಜಿಕ ಭದ್ರತಾ ಯೋಜನೆಯ ಮೂಲ ಉದ್ದೇಶವನ್ನು ಸಮರ್ಪಕವಾಗಿ ಈಡೇರಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣವೇ ಸ್ಪಂದಿಸಿ, ವಾರ್ಷಿಕ ಆದಾಯದ ಮಿತಿಯನ್ನು 32 ಸಾವಿರದಿಂದ 1.20 ಲಕ್ಷ ರೂಪಾಯಿಗೆ ಹೆಚ್ಚಿಸುವ ಮೂಲಕ ಬಡವರು ಹಾಗೂ ವಯೋವೃದ್ಧರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ಸಿ.ಟಿ. ರವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.