ಬೆಂಗಳೂರು : ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿದೆ. ಇದರ ಪರಿಣಾಮವಾಗಿ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಈ ಹಂಗಾಮಿನಲ್ಲಿ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯಕ್ಕೆ 3,369 ಕ್ಯುಸೆಕ್ ಒಳಹರಿವು ಇದ್ದು, ಹೊರಹರಿವು ಕೇವಲ 208 ಕ್ಯುಸೆಕ್ ಮಾತ್ರ ಇದೆ. ಪ್ರಸ್ತುತ ಜಲಾಶಯದಲ್ಲಿ 2,109.41 ಅಡಿ (25.16 ಟಿಎಂಸಿ) ನೀರು ಸಂಗ್ರಹವಾಗಿದ್ದು, ಇದು ಒಟ್ಟು ಸಾಮರ್ಥ್ಯದ ಶೇಕಡಾ 35 ರಷ್ಟಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,136 ಅಡಿ (45.74 ಟಿಎಂಸಿ) ನೀರು ಸಂಗ್ರಹವಿತ್ತು ಎಂಬುದು ಗಮನಾರ್ಹ. ಪ್ರಸಕ್ತ ತಿಂಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯಕ್ಕೂ ಕಳೆದ ಒಂದು ವಾರದಿಂದ ಒಳಹರಿವಿನ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದ್ದು, ಇದೀಗ 10,574 ಕ್ಯುಸೆಕ್ ದಾಟಿದೆ. ಸದ್ಯ ಜಲಾಶಯದಿಂದ 2,816 ಕ್ಯುಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗಲಿದೆ.