ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ನೀಡಲು ಉದ್ದೇಶಿಸಿರುವ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಇದರ ಹಿಂದಿರುವ ಅಸಲಿ ಆರ್ಥಿಕ ಲೆಕ್ಕಾಚಾರವನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಬಹಿರಂಗಪಡಿಸಿದ್ದಾರೆ. ಕೇಂದ್ರದ ಕಠಿಣ ನಿಯಮಾವಳಿಗಳಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಲಿದ್ದು, ಬಸ್ಸುಗಳು ರಸ್ತೆಗಿಳಿಯದೆ ಶೆಡ್‌ನಲ್ಲಿ ನಿಂತರೂ ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿಸಬೇಕಾದ ಅನಿವಾರ್ಯತೆ ಇರುವುದೇ ಈ ಹಿಂಜರಿಕೆ ಮುನ್ನಲೆಗೆ ಬರಲು ಮುಖ್ಯ ಕಾರಣವಾಗಿದೆ.
ಒಟ್ಟು 6,000 ಕೋಟಿ ರೂಪಾಯಿ ಮೌಲ್ಯದ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಒಪ್ಪಂದದ ಅಡಿಯಲ್ಲಿ ಪಡೆಯಲು ಪ್ರತಿವರ್ಷ ಅಂದಾಜು 3,000 ಕೋಟಿ ರೂಪಾಯಿ ಬಾಡಿಗೆಯನ್ನು ಖಾಸಗಿ ಆಪರೇಟರ್‌ಗಳಿಗೆ ಪಾವತಿಸಬೇಕಾಗುತ್ತದೆ. ಆದರೆ, ಈ ಬಸ್ಸುಗಳಿಂದ ಬಿಎಂಟಿಸಿಗೆ ವಾರ್ಷಿಕವಾಗಿ ಕೇವಲ 2,000 ಕೋಟಿ ರೂಪಾಯಿ ಮಾತ್ರ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ಅಂದರೆ, ಪ್ರತಿವರ್ಷ ಸುಮಾರು 1,000 ಕೋಟಿ ರೂಪಾಯಿ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಒಟ್ಟಾರೆ 7 ವರ್ಷಗಳ ಅವಧಿಗೆ ಬರೋಬ್ಬರಿ 21,000 ಕೋಟಿ ರೂಪಾಯಿ ಬಾಡಿಗೆ ನೀಡಬೇಕಾದ ಹೊಣೆಗಾರಿಕೆ ರಾಜ್ಯದ ಮೇಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಪ್ರತಿ ಬಸ್ಸಿಗೆ ಕೇವಲ 30 ರಿಂದ 40 ಲಕ್ಷ ರೂಪಾಯಿ ಮಾತ್ರ ಎಂದು ಸಚಿವರು ವಿವರಿಸಿದ್ದಾರೆ. ಕೇಂದ್ರದ ನಿಯಮಾವಳಿಗಳ ಪ್ರಕಾರ, ತಾಂತ್ರಿಕ ದೋಷ ಅಥವಾ ರಿಪೇರಿಯಿಂದಾಗಿ ಇ-ಬಸ್ಸುಗಳು ರಸ್ತೆಗೆ ಇಳಿಯದೆ ನಿಂತುಕೊಂಡರೂ ಸಹ ಒಪ್ಪಂದದ ಅನ್ವಯ ನಿಗದಿತ ಬಾಡಿಗೆ ಹಣವನ್ನು ಪಾವತಿಸಲೇಬೇಕು. ಬಸ್ಸುಗಳು ಸಂಚಾರ ನಡೆಸಲಿ ಅಥವಾ ಇಲ್ಲದಿರಲಿ, ಖಾಸಗಿ ಕಂಪನಿಗಳಿಗೆ ವರ್ಷಕ್ಕೆ 2,850 ಕೋಟಿ ರೂಪಾಯಿ ನೀಡಬೇಕು ಎನ್ನುವುದು ಎಷ್ಟು ಸರಿ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಎರಡು ದಿನ ಹಿಂದಷ್ಟೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದ್ದರು. ಈ ವೇಳೆ ಕೇಂದ್ರ ಸರ್ಕಾರ ನೀಡಿರುವ 4,500 ಬಸ್ಸುಗಳ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಂಸದರ ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಭೈರತಿ ಸುರೇಶ್, ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಕ್ಕೆಲ್ಲಾ ಉತ್ತರ ಕೊಡಲು ತಾವು ಸಿದ್ಧರಿಲ್ಲ ಎಂದಿದ್ದಾರೆ. ರಾಜ್ಯದ ಹಣಕಾಸು ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸದ್ಯದಲ್ಲೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.