ಬೆಂಗಳೂರು : ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೆಲ್ಯಾಡಿಯ ನವವಿವಾಹಿತ ಯುವಕ ಸುದೀಪ್ ರೈ ಆತ್ಮಹತ್ಯೆ ಪ್ರಕರಣದ ಮುಖ್ಯ ಆರೋಪಿ ಸೌಮ್ಯ ಶೆಟ್ಟಿ ಯಾನೆ ಅಪ್ಪು ಶೆಟ್ಟಿಗೆ ಹೈಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದೆ. ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುದೀಪ್ ರೈಗೆ ಸೌಮ್ಯ ಶೆಟ್ಟಿ ತೀವ್ರ ಮಾನಸಿಕ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಮೃತನ ಪೋಷಕರು ಮತ್ತು ಸ್ನೇಹಿತರು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುದೀಪ್ ರೈ ಅವರ ತಂದೆ ಬಿ. ದಾಮೋದರ ನೆಲ್ಯಾಡಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಆದೇಶದಂತೆ ಕಾರ್ಯಪ್ರವೃತ್ತರಾದ ಕಾರ್ಕಳ ಪೊಲೀಸರು, ಏಪ್ರಿಲ್ 11 ರಂದು ಆರೋಪಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದರು.
ಬಂಧನದ ಬಳಿಕ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏಪ್ರಿಲ್ 30 ರಂದು ಉಡುಪಿ ಜಿಲ್ಲಾ ನ್ಯಾಯಾಲಯವು ತಿರಸ್ಕರಿಸಿತ್ತು. ಇದೀಗ ಉಚ್ಚ ನ್ಯಾಯಾಲಯ ಕೂಡ ಆಕೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದರಿಂದ ಆರೋಪಿಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದ್ದು, ಜೈಲು ವಾಸ ಮುಂದುವರಿಯುವಂತಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಆರೋಪಿ ವಿರುದ್ಧ ಹಲವು ಬಲವಾದ ಸಾಕ್ಷ್ಯಗಳು ಮತ್ತು ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಸೌಮ್ಯ ಶೆಟ್ಟಿ ತನಗೆ ಈ ಹಿಂದೆ ನಡೆದಿದ್ದ ಎರಡು ವಿವಾಹಗಳ ವಿಷಯವನ್ನು ಮುಚ್ಚಿಟ್ಟು, ನೋಂದಣಿ ಕಚೇರಿಯಲ್ಲಿ ತಾನು ಅವಿವಾಹಿತೆ ಎಂದು ಸುಳ್ಳು ದಾಖಲೆ ನೀಡಿ ಸುದೀಪ್ ಅವರನ್ನು ಮದುವೆಯಾಗಿದ್ದಾಳೆ ಎಂಬ ಗಂಭೀರ ಆರೋಪವಿದೆ. ಫೆಬ್ರವರಿ 6 ರಂದು ಬೆಳ್ತಂಗಡಿಯ ಕುತ್ರೋಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮೊದಲ ಬಾರಿ ವಿವಾಹವಾಗಿ ನೋಂದಣಿ ಕಚೇರಿಗೆ ಆ ದಾಖಲೆ ನೀಡಿದ್ದ ಸೌಮ್ಯ, ತದನಂತರ ಮಾರ್ಚ್ 19 ರಂದು ಕಾರ್ಕಳದ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುನಃ ವಿವಾಹವಾಗಿದ್ದಳು. ಈ ಎರಡನೇ ಮದುವೆಯ ದಿನದಂದೇ ಸುದೀಪ್ ಅವರಿಗೆ ವಿಷ ಪ್ರಾಶನವಾಗಿದ್ದು, ಅವರು ತೀವ್ರ ಅಸ್ವಸ್ಥರಾಗಿದ್ದರು ಎಂದು ದೇವಸ್ಥಾನದ ಸಿಬ್ಬಂದಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ.
ಸುದೀಪ್ ಅವರ ಕುಟುಂಬದ ಆಸ್ತಿಯನ್ನು ಕಬಳಿಸುವ ಪೂರ್ವ ನಿಯೋಜಿತ ಸಂಚಿನೊಂದಿಗೆ ಈ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಈ ಪ್ರಕರಣದಲ್ಲಿ ದಿವಂಗತ ಸುದೀಪ್ ರೈ ಪರವಾಗಿ ಹೈಕೋರ್ಟ್‌ನ ಪ್ರಸಿದ್ಧ ನ್ಯಾಯವಾದಿಗಳಾದ ಬಂಟ್ವಾಳದ ಚಿದಾನಂದ ಮಾಣಿ ಹಾಗೂ ಬೆಂಗಳೂರಿನ ಹೆಚ್. ಎನ್. ಸಮೀರ್ ವಾದ ಮಂಡಿಸಿದ್ದರು.