image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಸಿಎಂ ಡಿ.ಕೆ.ಶಿವಕುಮಾರ್ ಭರವಸೆ

ಬೆಂಗಳೂರು : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ, ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ ಸುಮಾರು 37,370 ಕೋಟಿ ರೂಪಾಯಿಗಳ ಬಿಲ್ ಪಾವತಿಸುವಂತೆ ಮನವಿ ಸಲ್ಲಿಸಿದೆ. ಸಾಲ ಪಡೆದಾದರೂ ಶೀಘ್ರದಲ್ಲಿಯೇ ಈ ಬಾಕಿ ಹಣವನ್ನು ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಗುತ್ತಿಗೆದಾರರಿಗೆ ಸಕಾರಾತ್ಮಕ ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಕಾರ್ಯಾಧ್ಯಕ್ಷರಾದ ರವೀಂದ್ರ ಹಾಗೂ ಬಿ.ಸಿ.ದಿನೇಶ್ ಒಳಗೊಂಡ ನಿಯೋಗವು ಮಂಗಳವಾರ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಸಭೆಯ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, 2021-22ರಿಂದ 2023-24ರವರೆಗಿನ ಅವಧಿಯಲ್ಲಿ ವಿವಿಧ ಇಲಾಖೆಗಳಿಂದ ಬರಬೇಕಾದ ಒಟ್ಟು 37,370.76 ಕೋಟಿ ರೂ. ಬಿಲ್ ಬಾಕಿ ಇರುವುದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಿಎಂ ಗಮನಕ್ಕೆ ತರಲಾಗಿದೆ ಎಂದರು.

ಬಾಕಿ ಬಿಲ್ ಮೊತ್ತದ ಜೊತೆಗೆ ಜಿಎಸ್​ಟಿ ಮತ್ತು ವ್ಯಾಟ್ ಬಾಕಿ ಹಣ ಪಾವತಿಸುವುದು, ಕಂಟ್ರಾಕ್ಟರ್ ಲೈಸೆನ್ಸ್ ನವೀಕರಣ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸುವುದು ಹಾಗೂ ಜಿಬಿಎನಲ್ಲಿ ಕಟಾವು ಮಾಡಲಾಗಿದ್ದ ಶೇ.10 ಮತ್ತು ಶೇ.8 ರಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಸಂಘವು ಮುಖ್ಯಮಂತ್ರಿಗಳಿಗೆ ಕೋರಿದೆ. ಮನವಿ ಪತ್ರದ ಪ್ರಕಾರ, 2026ರ ಮಾರ್ಚ್​ 31ರ ವರೆಗಿನ ವಿವಿಧ ಇಲಾಖೆಗಳ ಬಾಕಿ ವಿವರ ಹೀಗಿದೆ: ಜಲಸಂಪನ್ಮೂಲ ಇಲಾಖೆ 13,000 ಕೋಟಿ ರೂ., ಲೋಕೋಪಯೋಗಿ ಇಲಾಖೆ 8,370 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್​ಡಿಪಿಆರ್) ಇಲಾಖೆ 3,800 ಕೋಟಿ ರೂ., ಸಣ್ಣ ನೀರಾವರಿ ಇಲಾಖೆ 3,000 ಕೋಟಿ ರೂ., ನಗರಾಭಿವೃದ್ಧಿ ಇಲಾಖೆ 2,000 ಕೋಟಿ ರೂ., ವಸತಿ ಮತ್ತು ವಕ್ಫ್ ಇಲಾಖೆ 2,600 ಕೋಟಿ ರೂ., ಕಾರ್ಮಿಕ ಇಲಾಖೆ 2,000 ಕೋಟಿ ರೂ. ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 2,600 ಕೋಟಿ ರೂ. ಸೇರಿದಂತೆ ಒಟ್ಟು 37,370.76 ಕೋಟಿ ರೂ. ಬಿಲ್ ಬಾಕಿ ಉಳಿದುಕೊಂಡಿದೆ. ಗುತ್ತಿಗೆದಾರರ ಎಲ್ಲಾ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ