ಧರ್ಮಸ್ಥಳ : ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ವಲಯದಲ್ಲಿ ಕೇಳಿಬಂದಿರುವ ಅಡ್ಡಮತದಾನದ ವಿವಾದಕ್ಕೆ ಸಂಬಂಧಿಸಿದಂತೆ, ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ಅವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಮಂಗಳವಾರ ಮುನ್ನೂರಕ್ಕೂ ಅಧಿಕ ಬೆಂಬಲಿಗರೊಂದಿಗೆ ನೂರಕ್ಕೂ ಹೆಚ್ಚು ಕಾರುಗಳ ಮರವಣಿಗೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ಅವರು, ತಾವೊಬ್ಬ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷಕ್ಕೆ ಯಾವುದೇ ದ್ರೋಹ ಎಸಗಿಲ್ಲ ಎಂದು ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡಿದರು.
ಕ್ಷೇತ್ರಕ್ಕೆ ಆಗಮಿಸಿದ ಶಾಸಕರು ಮೊದಲು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ತದನಂತರ ನೇತ್ರಾವತಿ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮುಗಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಹಾಗೂ ವಿಶೇಷ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದ ಶಾಸಕರು, "ವಿಧಾನ ಪರಿಷತ್ ಚುನಾವಣೆಯಲ್ಲಿ ವರಿಷ್ಠರು ಸೂಚಿಸಿದ ಅಭ್ಯರ್ಥಿಗೇ ಮತ ಚಲಾಯಿಸಿದ್ದೇನೆ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ನನ್ನ ವಿರುದ್ಧ ಆಧಾರರಹಿತ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪ ಮಾಡಿದವರಿಗೂ ಆ ದೇವರು ಒಳ್ಳೆಯದನ್ನು ಮಾಡಲಿ" ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.