ಬೆಂಗಳೂರು : ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಅಂತಿಮ ಗುರಿಯಲ್ಲ, ಅದು ರಾಷ್ಟ್ರ ನಿರ್ಮಾಣದ ಸಾಧನ ಮಾತ್ರ. ಕಾರ್ಯಕರ್ತರು ಕೇವಲ ಚುನಾವಣಾ ರಾಜಕಾರಣಕ್ಕೆ ಸೀಮಿತರಾಗದೆ ರಾಷ್ಟ್ರದ ಪುನರ್‌ನಿರ್ಮಾಣದ ಧೈಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಅಂಗವಾಗಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಪ್ರಶಿಕ್ಷಣ ವರ್ಗದಲ್ಲಿ ಅವರು ಮಾತನಾಡಿದರು. ಪಕ್ಷದಲ್ಲಿ ಜಾತಿಗೆ ಸ್ಥಾನವಿಲ್ಲ, ಸಿದ್ಧಾಂತಕ್ಕೇ ಆದ್ಯತೆ ಇದೆ. ಹಿಂದುತ್ವ, ರಾಷ್ಟ್ರ ಮೊದಲು ಹಾಗೂ ಅಂತ್ಯೋದಯವೇ ಬಿಜೆಪಿಯ ಸಿದ್ಧಾಂತಗಳಾಗಿದ್ದು, ಇಡೀ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವಾಗುವ ಗುರಿಯೊಂದಿಗೆ ಪಕ್ಷ ಕೆಲಸ ಮಾಡುತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರವನ್ನು ಗುರಿಯನ್ನಾಗಿ ಕಾಣದೆ ರಾಷ್ಟ್ರವನ್ನು ಸರ್ವಶಕ್ತವಾಗಿಸುವ ಗುರಿಯೊಂದಿಗೆ ನಿರಂತರವಾಗಿ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ 40 ಶೇಕಡಾ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು. ಮೂಡಾ, ವಾಲ್ಮೀಕಿ, ಅಬಕಾರಿ ಹಗರಣಗಳು ನಡೆದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಟೀಕಿಸಿದರು. ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತ ವಿಶ್ವಗುರುವಾಗಬೇಕು ಎಂಬುದು ಪ್ರಧಾನಿ ಮೋದಿಯವರ ಸಂಕಲ್ಪವಾಗಿದ್ದು, ಕಾರ್ಯಕರ್ತರು ಪ್ರಶಿಕ್ಷಣ ವರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ ಸಕಾರಾತ್ಮಕ ಮನೋಭಾವದಿಂದ ಅನುಭವಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸದರಾದ ಡಾ. ಸುಧಾಕರ್ ಕೆ, ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧ್ಯಕ್ಷರಾದ ರಾಮಕೃಷ್ಣಪ್ಪ, ಮಾಜಿ ಶಾಸಕರಾದ ವೆಂಕಟ ಮುನಿಯಪ್ಪ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.