ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ. ಇಲಾಖಾ ಪ್ರಗತಿ ಪರಿಶೀಲನಾ ಸಭೆಗೆ ಯಾವುದೇ ಅಗತ್ಯ ಅಂಕಿ-ಅಂಶ ಹಾಗೂ ದಾಖಲೆಗಳನ್ನು ತರದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಪಶುಸಂಗೋಪನೆ ಇಲಾಖೆಯ ಅಧಿಕಾರಿಯೊಬ್ಬರನ್ನು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕರ್ತವ್ಯದಿಂದಲೇ ಬಿಡುಗಡೆಗೊಳಿಸುವಂತೆ ಸಚಿವರು ಖಡಕ್ ಆದೇಶ ನೀಡಿದ್ದಾರೆ. ಇತ್ತೀಚೆಗೆ ನಡೆದ ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆದಿದೆ. ಇಲಾಖೆಯಲ್ಲಿ ಒಟ್ಟು 19 ಮಂದಿ ಅಧಿಕಾರಿಗಳಿದ್ದರೂ, ಪ್ರಮುಖ ಸಭೆಗೆ ಕನಿಷ್ಠ ಮಾಹಿತಿಯೂ ಇಲ್ಲದೆ ಬರಿಗೈಲಿ ಆಗಮಿಸಿದ್ದ ಅಧಿಕಾರಿಯ ನಡೆಗೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಗಳ ಪ್ರಗತಿ ಕುರಿತು ಸಚಿವರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ತಡಕಾಡಿದರು. "ಅಗತ್ಯ ದಾಖಲೆಗಳನ್ನು ತರದೆ ಮದುವೆಗೆ ಬಂದಂತೆ ಸಭೆಗೆ ಬಂದಿದ್ದೀರಾ?" ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣದ ಕುರಿತು ಚರ್ಚೆ ನಡೆಯಿತು. "ಕಳೆದ 20 ವರ್ಷಗಳಿಂದ ಸಂತಾನ ಹರಣ (ABC) ಕಾರ್ಯಕ್ರಮ ನಡೆಸುತ್ತಿದ್ದರೂ ನಾಯಿಗಳ ಸಂಖ್ಯೆ ಮಾತ್ರ ಯಥಾಸ್ಥಿತಿಯಲ್ಲಿ ಇರಲು ಹೇಗೆ ಸಾಧ್ಯ? ನೀವು ನಿಜವಾಗಿಯೂ ಕಾರ್ಯಕ್ರಮ ನಡೆಸುತ್ತಿದ್ದೀರಾ ಎನ್ನುವ ಸಂಶಯ ಕಾಡುತ್ತಿದೆ" ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಉಡಾಫೆಯ ಉತ್ತರ ನೀಡಲು ಯತ್ನಿಸಿದಾಗ ಮತ್ತಷ್ಟು ಕೆಂಡಾಮಂಡಲರಾದ ಸಚಿವರು, "ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ? ಇಂತಹ ಅಸಂಬದ್ಧ ಉತ್ತರಗಳನ್ನು ಕೊಡಬೇಡಿ. ಮುಂದಿನ ಸಭೆಗೆ ಬರುವಾಗ ನಿಖರ ಮಾಹಿತಿ ಮತ್ತು ಅಂಕಿ-ಅಂಶಗಳೊಂದಿಗೆ ಬರಬೇಕು" ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ನಿರ್ಲಕ್ಷ್ಯ ತೋರುವ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ನೀಡುವ ಮೂಲಕ ಸಚಿವರು ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ.