ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿದ್ಯುತ್ ವಲಯದ ಖಾಸಗೀಕರಣದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ವಿದ್ಯುತ್ ನಿಗಮಗಳನ್ನು ಖಾಸಗೀಕರಣಗೊಳಿಸುವ ವಿಚಾರದಲ್ಲಿ ತಾವು ಒಬ್ಬರೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಇದೇ ವೇಳೆ ನೌಕರರ ಒಕ್ಕೂಟದ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಖಾಸಗೀಕರಣಕ್ಕೆ ಸಂಬಂಧಿಸಿದ ಕಾನೂನನ್ನು 2003ರಲ್ಲೇ ಅಂದಿನ ಕೇಂದ್ರ ಸರ್ಕಾರ ಜಾರಿಗೆ ತಂದಾಗ ಯಾರೂ ಧ್ವನಿ ಎತ್ತಲಿಲ್ಲ ಎಂದು ನೆನಪಿಸಿದರು. ಸರ್ಕಾರದ ಯಶಸ್ಸಿಗೆ ಶ್ರಮಿಸುವ ನೌಕರರ ಹಿತ ಕಾಯಲು ಸರ್ಕಾರ ಸಿದ್ಧವಿದ್ದರೂ, ಅದಕ್ಕೆ ಪ್ರತಿಯಾಗಿ ನೌಕರರ ಬೆಂಬಲವೂ ಮುಖ್ಯ ಎಂದು 'ಗೀವ್ ಆಯಂಡ್ ಟೇಕ್' ಪದ್ಧತಿಯನ್ನು ಉಲ್ಲೇಖಿಸಿದರು. 2028ರಲ್ಲಿ ಮತ್ತೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲು ನೌಕರರ ಒಗ್ಗಟ್ಟು ಅಗತ್ಯ ಎಂದ ಅವರು, ನೀಡಿದ ಮಾತನ್ನು ಸರ್ಕಾರ ಉಳಿಸಿಕೊಳ್ಳಲಿದೆ ಎಂದು ಧೈರ್ಯ ತುಂಬಿದರು. ಜೊತೆಗೆ, ತಾವು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ರಹಿತವಾಗಿ 25 ಸಾವಿರ ಜನರನ್ನು ನೇಮಕ ಮಾಡಿದ್ದನ್ನು ಮತ್ತು ಜಗತ್ತಿಗೆ ಮಾದರಿಯಾದ ಪಾವಗಡ ಸೋಲಾರ್ ಪಾರ್ಕ್ ನಿರ್ಮಿಸಿದ್ದನ್ನು ಸ್ಮರಿಸಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ ಮತ್ತು ನಮ್ಮ ಸಿಬ್ಬಂದಿ ಯಾವುದೇ ಖಾಸಗಿ ಸಂಸ್ಥೆಗಿಂತ ಕಮ್ಮಿಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಖಾಸಗೀಕರಣ ಬೇಡ ಎಂಬ ನೌಕರರ ಒಕ್ಕೂಟದ ನ್ಯಾಯಯುತ ಬೇಡಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ಬಲರಾಮ್ ಸೇರಿದಂತೆ ವಿವಿಧ ಇಂಧನ ನಿಗಮಗಳ (ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ) ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೌಕರರ ಒಕ್ಕೂಟವು ಮುಖ್ಯವಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಟಾಟಾ ಪವರ್ ಕಂಪನಿಯು ಸಮಾನಾಂತರ ವಿದ್ಯುತ್ ಪರವಾನಗಿ ಕೋರಿ ಕೆಇಆರ್‌ಸಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂಬುದು ಮೊದಲ ಒತ್ತಾಯವಾಗಿದೆ. ಇದರೊಂದಿಗೆ, 2006ಕ್ಕಿಂತ ಮುಂಚಿನ ಅಧಿಸೂಚನೆ ಅನ್ವಯ ನೇಮಕವಾದ ನೌಕರರಿಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಬೇಕು, ವಿದ್ಯುತ್ ಅಪಘಾತಗಳ ಸಮಯದಲ್ಲಿ ನೌಕರರು ಹಾಗೂ ಇಂಜಿನಿಯರ್‌ಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು ಮತ್ತು ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರದ ಅಧಿಕಾರವನ್ನು ವಿಕೇಂದ್ರಿಕರಿಸಬೇಕು ಎಂದು ಒಕ್ಕೂಟವು ಸರ್ಕಾರವನ್ನು ಆಗ್ರಹಿಸಿದೆ.