image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಖಾಸಗೀಕರಣ ಪ್ರಶ್ನೆಯೇ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟನೆ

ಖಾಸಗೀಕರಣ ಪ್ರಶ್ನೆಯೇ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟನೆ

ಬೆಂಗಳೂರು: ರಾಜ್ಯದ ಜನರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ನಮ್ಮ ಇಂಧನ ಇಲಾಖೆ ಸಂಪೂರ್ಣ ಬಲಿಷ್ಠವಾಗಿದ್ದು, ಯಾವುದೇ ಕಾರಣಕ್ಕೂ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್​ಗಳ ಒಕ್ಕೂಟ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟಾಟಾ ಪವರ್ ಕಂಪನಿಯು ಕರ್ನಾಟಕದಲ್ಲಿ ವಿದ್ಯುತ್‌ ಸರಬರಾಜು ಮಾಡಲು ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್​​ಸಿ) ಅರ್ಜಿ ಸಲ್ಲಿಸಿರುವ ಕುರಿತು ಪ್ರಸ್ತಾಪಿಸಿದ ಸಚಿವರು, ನಮ್ಮ ಸರ್ಕಾರ ಸದಾ ನೌಕರರ ಪರವಾಗಿದೆ. ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದ್ದು, ಅದರಂತೆ ಎಸ್ಕಾಂಗಳು ಕೆಇಆರ್ ಸಿ ಮುಂದೆ ಆಕ್ಷೇಪಣೆ ಸಲ್ಲಿಸಿವೆ. ನಾವು ಯಾವುದೇ ಖಾಸಗಿ ಕಂಪನಿಗಿಂತ ಕಮ್ಮಿಯಿಲ್ಲ. ನೌಕರರು ಮತ್ತು ಅಧಿಕಾರಿಗಳ ಬೇಡಿಕೆಗಳಿಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಲಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಇಂಧನ ಭದ್ರತೆ ಕಲ್ಪಿಸಲು ಇಲಾಖೆ ಈಗಾಗಲೇ ದೂರದೃಷ್ಟಿಯ ಯೋಜನೆಗಳನ್ನು ಸಿದ್ದಪಡಿಸಿದ್ದು, ಮುಂದಿನ 25 ವರ್ಷಗಳ ಅವಧಿಗೆ ವಿದ್ಯುತ್ ಭದ್ರತೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರ ಸಹಭಾಗಿತ್ವದೊಂದಿಗೆ 10,000 ಎಕರೆಯಲ್ಲಿ ಸೌರ ಪಾರ್ಕ್ ನಿರ್ಮಿಸಲಾಗಿದ್ದು, ರೈತರು ಇನ್ನೂ 10,000 ಎಕರೆ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಸದ್ಯ ವಿದ್ಯುತ್ ಉತ್ಪಾದನೆ ಅತ್ಯುತ್ತಮವಾಗಿದ್ದು, ಪೀಕ್ ಅವರ್‌ನಲ್ಲಿ ವಿದ್ಯುತ್ ಮಾರಾಟ ಹೆಚ್ಚಿಸಿರುವುದರಿಂದ ಇಲಾಖೆಗೆ ಲಾಭವಾಗಿದೆ. ವಿನಿಮಯ ಆಧಾರದ ಮೇಲೆ ಹಾಗೂ ದೀರ್ಘಾವಧಿ ಒಪ್ಪಂದಗಳ ಮೂಲಕ ವಿದ್ಯುತ್ ಖರೀದಿ ಮಾಡಿ ಇಂಧನ ಭದ್ರತೆಗೆ ಕ್ರಮ ವಹಿಸಲಾಗಿದೆ ಎಂದರು. ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1.67 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇದಕ್ಕಾಗಿ ಬಜೆಟ್​​ನಲ್ಲೇ ಅಗತ್ಯ ಅನುದಾನ ಕಲ್ಪಿಸಲಾಗಿದೆ. ಇದರೊಂದಿಗೆ ರೈತರ ಪಂಪ್ ಸೆಟ್​​ಗಳಿಗೆ ಉಚಿತ ವಿದ್ಯುತ್ ಪೂರೈಸಲು 21,000 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ನಮ್ಮ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ನೌಕರರು ತಂಡವಾಗಿ ಕೆಲಸ ಮಾಡುತ್ತಿದ್ದು, ಯಾವುದೇ ಸಮಸ್ಯೆ ಎದುರಾದರೂ ಶೀಘ್ರವಾಗಿ ಪರಿಹರಿಸಲಿದ್ದಾರೆ. ಈಗಾಗಲೇ ಇಲಾಖೆಯಲ್ಲಿ ಮೂಲಸೌಕರ್ಯ ಹೆಚ್ಚಿಸಲು 120 ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

Category
ಕರಾವಳಿ ತರಂಗಿಣಿ