ಬೆಂಗಳೂರು : ಬೆಂಗಳೂರಿನಿಂದ 100 ಕಿಲೋ ಮೀಟರ್ ಸುತ್ತಮುತ್ತ ಇರುವ ಪ್ರಮುಖ ನಗರಗಳಿಗೆ ಚತುಷ್ಪಥ (ನಾಲ್ಕು ಹಳಿಗಳ) ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅದರೊಂದಿಗೆ ರಾಜಧಾನಿಯಿಂದ ಕರಾವಳಿ ಭಾಗದ ಮಂಗಳೂರಿಗೂ ಚತುಷ್ಪಥ ಮಾರ್ಗ ನಿರ್ಮಾಣ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರು ಪ್ರಕಟಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ್ದ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಕರ್ನಾಟಕದ ರೈಲ್ವೇ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದರು. ಬೆಂಗಳೂರಿನಿಂದ ತುಮಕೂರು, ಮೈಸೂರು, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಮತ್ತು ಕೋಲಾರಕ್ಕೆ ಚತುಷ್ಪಥ ಹಳಿಗಳನ್ನು ನಿರ್ಮಿಸಬೇಕು ಎಂದು ಅವರು ಕೇಂದ್ರ ಸಚಿವರಿಗೆ ಕೋರಿದ್ದರು.
ರಾಜ್ಯ ಸರ್ಕಾರದ ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು, ಈಗಾಗಲೇ ಬೆಂಗಳೂರು ಮತ್ತು ತುಮಕೂರು ನಡುವಿನ ಚತುಷ್ಪಥ ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಮುಂದಿನ ಒಂದೂವರೆ ಇಂದ ಎರಡು ವರ್ಷಗಳ ಅವಧಿಯಲ್ಲಿ ಈ ಕಾಮಗಾರಿಯನ್ನು ಮುಗಿಸುವ ಉದ್ದೇಶ ಹೊಂದಲಾಗಿದ್ದು, ಅದೇ ರೀತಿ ಬೆಂಗಳೂರು ಮತ್ತು ಮೈಸೂರು ನಡುವಿನ ಚತುಷ್ಪಥ ಮಾರ್ಗ ನಿರ್ಮಾಣಕ್ಕೂ ಶೀಘ್ರದಲ್ಲೇ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಇದೇ ವೇಳೆ ಬೆಂಗಳೂರು ಮತ್ತು ಮಂಗಳೂರು ನಡುವೆ ತ್ವರಿತ ರೈಲು ಸಂಚಾರ ವ್ಯವಸ್ಥೆಯಾಗಲು ಸಕಲೇಶಪುರ ಹಾಗೂ ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗಗಳಾಗಬೇಕು ಎಂದು ಎಂ.ಬಿ. ಪಾಟೀಲ್ ಅವರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸೋಮಣ್ಣ ಅವರು, ಇದು ಅತ್ಯಂತ ಉಪಯುಕ್ತ ಸಲಹೆಯಾಗಿದ್ದು ಬಂದರು ನಗರವಾದ ಮಂಗಳೂರಿಗೆ ಚತುಷ್ಪಥ ರೈಲು ಸಂಪರ್ಕ ಕಲ್ಪಿಸುವುದರಿಂದ ರಾಜ್ಯಕ್ಕೆ ಅನೇಕ ಪ್ರಯೋಜನಗಳಾಗಲಿವೆ. ಹೀಗಾಗಿ ಈ ಯೋಜನೆಯೂ ನಮ್ಮ ಆದ್ಯತೆಯಾಗಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ರೈಲ್ವೆ ಮೂಲಸೌಕರ್ಯದ ಗುಣಮಟ್ಟ, ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಬಳಸಲಾಗುವ ಎಸ್‌ಪಿಐಸಿ (Self-Propelled Inspection Car) ಎಂಬ ವಿಶೇಷ ರೈಲ್ವೆ ಪರಿಶೀಲನಾ ವಾಹನದಲ್ಲಿ ಇಬ್ಬರೂ ಸಚಿವರು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಚನ್ನಪಟ್ಟಣದವರೆಗೆ ಒಟ್ಟಿಗೆ ಪ್ರಯಾಣಿಸಿದರು. ಈ ಪ್ರಯಾಣದ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ರೈಲ್ವೆ ಯೋಜನೆಗಳ ಕುರಿತು ಎಂ.ಬಿ. ಪಾಟೀಲ ಅವರು ಚರ್ಚೆ ನಡೆಸಿ, ಕೇಂದ್ರ ಸಚಿವರಿಗೆ ಅಧಿಕೃತ ಪತ್ರವನ್ನು ಹಸ್ತಾಂತರಿಸಿದರು. ನಂತರ ಚನ್ನಪಟ್ಟಣದಿಂದ ಮರಳುವ ಮಾರ್ಗ ಮಧ್ಯೆ ಬೆಂಗಳೂರು ನಗರದ ಕುಂಬಳಗೋಡು ಸಮೀಪದ ರಾಮೋಹಳ್ಳಿಯಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆಯ ಕಾಮಗಾರಿಗಳನ್ನು ಜಂಟಿಯಾಗಿ ವೀಕ್ಷಿಸಿದ ಸಚಿವರು, ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.